ಗೋಣಿಕೊಪ್ಪಲು, ಸೆ. 16: ಇತ್ತೀಚೆಗೆ ಸುರಿದ ಭಾರೀ ಮಳೆ ಯಿಂದ ಗೋಣಿಕೊಪ್ಪ, ಅರುವತೊಕ್ಲು ಸಂಪರ್ಕ ಸೇತುವೆಯು ಹಾಳಾಗಿದ್ದು ಮಳೆಯ ರಭಸಕ್ಕೆ ಸೇತುವೆಯ ಒಂದು ಭಾಗ ಕುಸಿತಗೊಂಡಿತ್ತು. ಸಣ್ಣದಾಗಿ ಬಿರುಕು ಬಿಟ್ಟಿದ್ದ ಸೇತುವೆಯ ಒಂದು ಭಾಗ ಇದೀಗ ದೊಡ್ಡದಾದ ಗುಂಡಿ ಯಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಗೋಣಿಕೊಪ್ಪ ಬೈಪಾಸ್ ರಸ್ತೆಗೆ ಹಾಗೂ ಅರುವತೊಕ್ಲು ಮೈಸೂರಮ್ಮ ನಗರಕ್ಕೆ ಸಂಪರ್ಕ ರಸ್ತೆಯಲ್ಲಿ ಬಹಳ ಹಳೆಯದಾದ ಸೇತುವೆ ಇದಾಗಿದ್ದು ದಿನನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಇಲ್ಲಿ ಸಂಚರಿಸುತ್ತಿವೆ. ದೊಡ್ಡದಾದ ಗುಂಡಿಯಾಗಿದ್ದರೂ ಇಲ್ಲಿಯ ತನಕ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ.

ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿನಿತ್ಯ ಓಡಾಡುತ್ತಿದ್ದು ರಾತ್ರಿ ವೇಳೆಯಲ್ಲಿ ಜನರು ಹಾಗೂ ವಾಹನಗಳು ಎಚ್ಚರ ತಪ್ಪಿದಲ್ಲಿ ಸೇತುವೆ ಅಡಿಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಮಳೆ ನಿಂತು ಹಲವು ಸಮಯ ಕಳೆದರೂ ಸೇತುವೆ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಮುಂದಾಗದಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆ, ಪಂಚಾಯಿತಿ ಕೂಡಲೇ ಕ್ರಮಕೈ ಗೊಂಡು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಹೆಚ್.ಕೆ. ಜಗದೀಶ್