ಕೂಡಿಗೆ, ಸೆ. 15: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ದೇಶಾದ್ಯಂತ ಸ್ವಚ್ಛ ಭಾರತ್ ಯೋಜನೆಯು ಅನುಷ್ಠಾನಗೊಳ್ಳುತ್ತಿರುವ ಸಂದರ್ಭ ಸ್ವಯಂ ಪ್ರೇರಿತರಾಗಿ ತಮ್ಮ ಗ್ರಾಮ ತಮ್ಮಿಂದಲೇ ಸ್ವಚ್ಛಗೊಳಿಸಬೇಕು ಎಂಬ ಉದ್ದೇಶದಿಂದ ಕೂಡಿಗೆ ಗ್ರಾ.ಪಂ. ಹುದಗೂರು ಗ್ರಾಮದ ಯುವಕರ ತಂಡವು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವದು ವಿಶೇಷವಾಗಿದೆ.

ಸ್ವಚ್ಛ ಭಾರತ್ ಹಳ್ಳಿಗೆ ಎಂಬ ಧ್ಯೇಯೋದ್ದೇಶದೊಂದಿಗೆ ಇಲ್ಲಿನ ಯುವಕರ ಸಂಘ ಬಸ್ ನಿಲ್ದಾಣಗಳನ್ನು ಕಂಗೊಳಿಸುವಂತೆ ಮಾಡಿದ್ದಾರೆ. ಜೊತೆಯಲ್ಲಿ ಈ ವ್ಯಾಪ್ತಿಗೆ ಹೊಂದಿಕೊಂಡಿರುವ ಎರಡೂ ಸೇತುವೆಯ ಮೇಲ್ಭಾಗದಲ್ಲಿ ಮಣ್ಣು ತುಂಬಿಕೊಂಡಿರುವದನ್ನು ಶುಚಿತ್ವಗೊಳಿಸಿ ಮಳೆ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಈ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಿಗೆ ಗಿಡಗಳನ್ನು ನೆಡಲಾಗಿದೆ. ಪ್ರತೀ ಭಾನುವಾರ ಗ್ರಾಮದ ಯುವಕರು ಶ್ರಮದಾನ ಮಾಡುವ ಚಿಂತನೆಯನ್ನು ಮಾಡಿದ್ದಾರೆ. ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದಲ್ಲಿರುವ ಸಮುದಾಯ ಕೇಂದ್ರ ಮತ್ತು ಸರ್ಕಾರಿ ಕಟ್ಟಡಗಳನ್ನು ಶುಚಿಗೊಳಿಸಿ, ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿದ್ದಾರೆ.

ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಕೆ.ಪಿ. ಗಿರೀಶ್, ಹಿರಿಯ ನಾಗರಿಕರಾದ ಐ.ಎಸ್. ಗಣೇಶ್, ಟಿ.ಎಂ. ರವಿ, ಮಲ್ಲಪ್ಪ, ಶಾಮ್, ವಿಕ್ರಂ ಸೇರಿದಂತೆ ಸಂಘದ ನಿರ್ದೇಶಕರುಗಳು ವಿವಿಧ ಯುವಕ ಸಂಘದ ಪದಾಧಿಕಾರಿಗಳು ಈ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.