ಮಡಿಕೇರಿ, ಸೆ. 15: ಮೂರ್ನಾಡುವಿನ ಮಾರುತಿ ಸಂಯುಕ್ತ ಪ.ಪೂ. ಕಾಲೇಜು ಮತ್ತು ಕ್ಲೀನ್ ಕೂರ್ಗ್ ಸಂಸ್ಥೆ ವತಿಯಿಂದ ಪಾರಾಣೆಯವರೆಗೆ ಸೈಕಲ್ ಜಾಥಾ ತೆರಳಿ ಸ್ವಚ್ಛತಾ ಜಾಗೃತಿ ಮೂಡಿಸಲಾಯಿತು.
ಕ್ಲೀನ್ ಕೂರ್ಗ್ ಸಂಸ್ಥೆಯ ಸದಸ್ಯ ಬಡುವಂಡ ಅರುಣ್ ಅಪ್ಪಚ್ಚು ನೇತೃತ್ವದಲ್ಲಿ 12 ಸೈಕಲಿಸ್ಟ್‍ಗಳು ಮೂರ್ನಾಡುವಿನಿಂದ ಪಾರಾಣೆಗೆ ತೆರಳಿ ಮಾರ್ಗದುದ್ದಕ್ಕೂ ಜನತೆಗೆ, ವಿದ್ಯಾರ್ಥಿಗಳಿಗೆ ಪರಿಸರ ಸ್ವಚ್ಛತೆ ಬಗ್ಗೆ ತಿಳುವಳಿಕೆ ಮೂಡಿಸುವ ಕರಪತ್ರ ಹಂಚಿದರು. ಪಾರಾಣೆ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಸ್ವಚ್ಛ ಪರಿಸರ ಮತ್ತು ‘‘ನನ್ನ ಕಸ - ನನ್ನ ಹೊಣೆ’’ ಸಂದೇಶದ ಬಗ್ಗೆ ಮಾಹಿತಿ ನೀಡಿದರು.
ನಿಸರ್ಗಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಸದಂತೆಯೂ ಮನವಿ ಮಾಡಿದ ಅರುಣ್ ಮತ್ತು ತಂಡದವರು ಶಾಲೆಗೆ ಸ್ಟೀಲ್ ಲೋಟಗಳನ್ನು ಕೊಡುಗೆಯಾಗಿ ನೀಡಿದರು. ಪಾರಾಣೆ ಶಾಲಾ ಮುಖ್ಯಶಿಕ್ಷಕಿ ರಜನಿ ಈ ತಂಡದ ಸೇವೆಯನ್ನು ಶ್ಲಾಘಿಸಿದರು.