ಗೋಣಿಕೊಪ್ಪಲು, ಸೆ. 14: ಸಹಕಾರ ಸಂಘದಿಂದ ಸಾಲ ಪಡೆದ ರೈತರ ಸಾಲ ಮನ್ನಾಕ್ಕೆ ಸರ್ಕಾರದಿಂದ 32 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ನೇರವಾಗಿ ರೈತರ ಖಾತೆಗೆ ಹಣ ಜಮಾಗೊಳ್ಳುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ರೈತರು ಬಳಲುತ್ತಿದ್ದಾರೆ. ರೈತರು ಹಾಗೂ ಬೆಳೆಗಾರರು ಚೇತರಿಸಿ ಕೊಳ್ಳಲು ಕಳೆದ ಬಾರಿ ಘೋಷಿಸಿದ ಸಾಲ ಮನ್ನಾವನ್ನು ತಕ್ಷಣವೇ ಕಾರ್ಯರೂಪಕ್ಕೆ ತರುವಂತೆ ಮುಖ್ಯ ಮಂತ್ರಿಗಳಲ್ಲಿ ಕೆಲ ದಿನಗಳ ಹಿಂದೆ ಜಿ.ಪಂ. ಅಧ್ಯಕ್ಷ ಹರೀಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಿಯಕ್‍ಪೂವಂಡ ಬೋಪಣ್ಣ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಇವರೊಂದಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿತ್ತು. ಮನವಿಗೆ
(ಮೊದಲ ಪುಟದಿಂದ) ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದಲ್ಲಿ ಸಾಲಪಡೆದ ರೈತರ ಖಾತೆಗೆ 200 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಪ್ರಕಾರದಲ್ಲಿ ಜಿಲ್ಲೆಗೆ ರೂ. 32 ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಮತ್ತು ಡಿ.ಸಿ.ಸಿ. ಬ್ಯಾಂಕಿನಿಂದ ಅಲ್ಪಾವಧಿ ಬೆಳೆ ಸಾಲ ಪಡೆದು ಬಾಕಿ ಉಳಿಸಿಕೊಂಡ 32,903 ರೈತರು ಅರ್ಹರೆಂದು ಗುರುತಿಸಲಾಗಿತ್ತು. ಆದರೆ ಗ್ರೀನ್ ಲಿಸ್ಟ್ ವ್ಯಾಪ್ತಿಗೆ ಕೇವಲ 16,673 ರೈತರನ್ನು ಸಾಲದ ವ್ಯಾಪ್ತಿಗೆ ಒಳಪಡಿಸಲಾಗಿತ್ತು. ಈ ಪ್ರಕಾರ ಇದುವರೆಗೆ 10421 ರೈತರಿಗೆ 68.45 ಕೋಟಿ ಸಾಲ ಮನ್ನಾದ ಮೊತ್ತ ಬಿಡುಗಡೆ ಮಾಡಿದೆ. ಉಳಿದ 6252 ರೈತರಿಗೆ ಸಾಲದ ಹಣ ಬಿಡುಗಡೆಗೊಂಡಿರಲಿಲ್ಲ. ಮತ್ತು 16230 ರೈತರನ್ನು ಮತ್ತೆ ಗ್ರೀನ್ ಲಿಸ್ಟ್ ವ್ಯಾಪ್ತಿಗೆ ಒಳಪಡಿಸಿ ಒಟ್ಟು 32903 ಅರ್ಹ ರೈತರಿಗೆ ಸಾಲ ಮನ್ನಾ ಮೊತ್ತ ವನ್ನು ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಇದರಂತೆ ಮುಖ್ಯಮಂತ್ರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸಾಲಮನ್ನಾ ಮೊತ್ತವನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ 538 ಕೋಟಿ ಅನುದಾನ ಬಿಡುಗಡೆ ಮಾಡುವದಾಗಿ ಘೋಷಿಸಿದರು. ಈ ಪ್ರಕಾರ ರೂ. 100 ಕೋಟಿ ಮೊದಲ ಹಂತವಾಗಿ ಬಿಡುಗಡೆಗೊಂಡಿದೆ. ಉಳಿದ ರೂ. 438 ಕೋಟಿ ಹಂತ ಹಂತವಾಗಿ ಬಿಡುಗಡೆಗೊಂಡು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಇದೇ ಸಂದರ್ಭ ಮಾತನಾಡಿದ ಶಾಸಕರು ಸೆಪ್ಟೆಂಬರ್ 20ರಂದು ನಡೆಯುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಆಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾಗಿ ಮಹೇಶ್ ಜೈನಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಕಾರ ಕಾರ್ಯಕ್ರಮವನ್ನು ತಾ. 17ರಂದು ಹುಟ್ಟುಹಬ್ಬ ಆಚರಣೆಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಾಲನೆ ದೊರೆಯಲಿದೆ. ಕಾರ್ಯಕ್ರಮದಂತೆ ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ಆರೋಗ್ಯ ಕೇಂದ್ರಗಳಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ತಾ. 17ರಂದು ಮೋದಿ ಹುಟ್ಟುಹಬ್ಬದ ಪ್ರಯುಕ್ತ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ ತಾ. 17ರಂದು ಕೈಕೇರಿ ಭಗವತಿ ದೇವಸ್ಥಾನದಿಂದ ಗೋಣಿಕೊಪ್ಪಲು ಬಸ್ ನಿಲ್ದಾಣದವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸ್ವಚ್ಛ ಮಾಡುವ ಮೂಲಕ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ, ಗ್ರಾ.ಪಂ. ಸದಸ್ಯರುಗಳಾದ ಕುಲ್ಲಚಂಡ ಬೋಪಣ್ಣ, ಸುರೇಶ್ ರೈ, ರತಿ ಅಚ್ಚಪ್ಪ, ಪ್ರಮುಖರಾದ ಮಲ್ಲಂಡ ಮಧು ದೇವಯ್ಯ, ಜಿಮ್ಮ ಸುಬ್ಬಯ್ಯ ಮತ್ತಿತರು ಹಾಜರಿದ್ದರು.