ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಸೆ. 14 : ಭಾರತ ದೇಶದಲ್ಲಿ ಕೊಡಮಾಡಲ್ಪಡುವ ನಾಲ್ಕನೆಯ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯಾದ ‘ಪದ್ಮಶ್ರೀ’ ಬಿರುದು ಪಡೆಯುವ ಹಾದಿಯಲ್ಲಿ ಕೊಡಗು ಜಿಲ್ಲೆಯ ಹೆಮ್ಮೆಯ ಕ್ರೀಡಾಪಟುವಾಗಿ ಗುರುತಿಸಲ್ಪಟ್ಟಿರುವ ಡಾ. ಮೊಳ್ಳೇರ ಪಿ. ಗಣೇಶ್ ಅವರು ಇದೀಗ ಶಿಫಾರಸ್ಸುಗೊಂಡಿದ್ದಾರೆ. ಈ ಮೂಲಕ ಕ್ರೀಡಾ ಜಿಲ್ಲೆಯೆಂದು ದೇಶದಲ್ಲಿ ಹೆಸರು ಮಾಡಿರುವ ಕೊಡಗಿನ ಕ್ರೀಡಾಪಟುವೊಬ್ಬರು ಈ ಸಾಧನೆಯ ಹಾದಿಯಲ್ಲಿರುವದು ಕೊಡಗು ಜಿಲ್ಲೆಯ ಜನತೆಯಲಿ,್ಲ ಕ್ರೀಡಾಭಿಮಾನಿಗಳಲ್ಲಿ, ಹೊಸತೊಂದು ಸಂಚಲನ ಮೂಡಿಸಿದೆ.ದೇಶದಲ್ಲಿ ಭಾರತರತ್ನ ಅತ್ಯುನ್ನತ ಬಿರುದಾಗಿದ್ದು, ಇದರ ನಂತರ ಬರುವ ಪದ್ಮಶ್ರೀ ಪ್ರಶಸ್ತಿಯ ಪಟ್ಟಿಯಲ್ಲಿ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ನಾಲ್ಕನೆಯ ಅತ್ಯುನ್ನತ ಪ್ರಶಸ್ತಿಯಾಗಿ ಪದಶ್ರೀ ಪ್ರಶಸ್ತಿ ಬರುತ್ತದೆ. ಕೊಡಗು ಜಿಲ್ಲೆಯಲ್ಲಿ ಸೇನಾ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿರುವ ಫೀ.ಮಾ. ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಬೇಕೆಂಬ ಬಹು ವರ್ಷಗಳ ಬೇಡಿಕೆ ಇನ್ನೂ ಬೇಡಿಕೆಯಲ್ಲೇ ಉಳಿದಿದೆ. ಆದರೆ, ಮತ್ತೋರ್ವ ಸೇನಾನಿ ಜನರಲ್ ತಿಮ್ಮಯ್ಯ ಅವರಿಗೆ 1954ರಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಮೂರನೇ ಪ್ರಶಸ್ತಿಯಾಗಿರುವ ಪದ್ಮಭೂಷಣವನ್ನು ನೀಡಲಾಗಿದೆ. ಇದಾದ ಬಳಿಕ ಕೊಡಗಿನವರಾದ ಮಡಿಕೇರಿಯ ರಾಣಿಪೇಟೆಯವರಾಗಿದ್ದ ಶಿಕ್ಷಣ ಕ್ಷೇತ್ರದ ಸಾಧಕಿ ಹಾಗೂ ಸಮಾಜ ಸೇವಕಿ ಕೋದಂಡ ರೋಹಿಣಿ ಪೂವಯ್ಯ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿರುವದು ಕೊಡಗು ಜಿಲ್ಲೆಯ ಮಟ್ಟಿಗೆ ಇತಿಹಾಸವಾಗಿದೆ. ಇದೀಗ ಎರಡನೆಯ ವ್ಯಕ್ತಿಯಾಗಿ ಪದ್ಮಶ್ರೀ ಪ್ರಶಸ್ತಿಯ ಪಟ್ಟಿಯಲ್ಲಿ ಹಾಕಿಪಟು ಒಲಿಂಪಿಯನ್ ಡಾ. ಮೊಳ್ಳೆರ ಪಿ. ಗಣೇಶ್ ಅವರು ಈ ಬಾರಿ ದೇಶದ ಕ್ರೀಡಾ ಸಚಿವಾಲಯದ ಮೂಲಕ ಶಿಫಾರಸ್ಸುಗೊಳ್ಳುವ ಮೂಲಕ ಹೊಸ ನಿರೀಕ್ಷೆಯೊಂದು ಕೊಡಗಿನಲ್ಲಿ ಪ್ರಾರಂಭಗೊಂಡಿದೆ.
(ಮೊದಲ ಪುಟದಿಂದ)
ಈ ಬಾರಿ ಶಿಫಾರಸ್ಸುಗೊಂಡಿರುವವರು
ಭಾರತ ಕ್ರೀಡಾ ಸಚಿವಾಲಯದ ಮೂಲಕ ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಹಲವರು ಶಿಫಾರಸ್ಸುಗೊಂಡಿದ್ದಾರೆ. ಹಾಕಿಯಲ್ಲಿ ಒಲಿಂಪಿಯನ್ ಎಂ.ಪಿ. ಗಣೇಶ್, ಆರ್ಚರಿಯಲ್ಲಿ ತರುಣ್‍ದೀಪ್ ರೈ ಅವರುಗಳು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸುಗೊಂಡಿದ್ದರೆ. ಇವರೊಂದಿಗೆ ಇದೇ ಪ್ರಶಸ್ತಿಗೆ ಕುಸ್ತಿಯಲ್ಲಿ ವಿನೇಶ್ ಪೋಗಾಟ್, ಪೆಡ್ಲರ್ ಮಾನಿಕಾಬಾತ್ರಾ, ಕ್ರಿಕೆಟ್‍ನಲ್ಲಿ ಹರ್ಮನ್ ಪ್ರೀತ್ ಕೌರ್, ರಾಷ್ಟ್ರೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿರಾಮ್‍ಪಾಲ್, ಶೂಟರ್ ಸುಮಾಶಿರೂರ್, ಪರ್ವತಾರೋಹಿಗಳಾದ ತಾಶಿ ಮತ್ತು ನುಂಗ್‍ಶೀ ಮಲಿಕ್ ಶಿಫಾರಸ್ಸಾಗಿದ್ದಾರೆ.
ಪದ್ಮವಿಭೂಷಣ್‍ಗೆ ಮೇರಿ ಕೋಮ್
ಮಹಿಳಾ ಬಾಕ್ಸಿಂಗ್ ಪಟು ಮೇರಿ ಕೋಮ್, ಪದ್ಮವಿಭೂಷಣ್ ಹಾಗೂ ಬ್ಯಾಡ್‍ಮಿಂಟನ್ ತಾರೆ ಪಿ.ಪಿ. ಸಿಂಧು ಪದ್ಮವಿಭೂಷಣ್‍ಗೆ ನಾಮನಿರ್ದೇಶನರಾಗಿದ್ದಾರೆ.
ಡಾ. ಎಂ.ಪಿ. ಗಣೇಶ್ ಕುರಿತಾಗಿ
ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸುಗೊಂಡಿರುವ ಕೊಡಗು ಜಿಲ್ಲೆಯವರಾದ ಡಾ. ಎಂ.ಪಿ. ಗಣೇಶ್ ಅವರ ಸಾಧನೆ ಕ್ರೀಡಾರಂಗದಲ್ಲಿ ಬಹಳಷ್ಟಿದೆ.
ಇವರು ಹಾಕಿಯಲ್ಲಿ ದೇಶದ ಓರ್ವ ಆಟಗಾರನಾಗಿ, ತಂಡದ ನಾಯಕನಾಗಿ, ತರಬೇತುದಾರರಾಗಿ, ಆಯ್ಕೆದಾರನಾಗಿ ಕರ್ತವ್ಯ ನಿರ್ವಹಿಸಿದವರು. ಇದರ ಜತೆಗೆ ಹಾಕಿಯಲ್ಲಿ ಗೌರವ ಡಾಕ್ಟರೇಟ್‍ನ ಬದಲಾಗಿ ಥೀಸೀಸ್ ಬರೆಯುವ ಮೂಲಕ ತಮಿಳುನಾಡುವಿನ ಕಾರೈಕುಡಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ದೇಶದ ಏಕೈಕ ಆಟಗಾರರೂ ಆಗಿದ್ದಾರೆ.
ಆರಂಭದಲ್ಲಿ ಫುಟ್‍ಬಾಲ್ ಆಟಗಾರರಾಗಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದ ಇವರು ನಂತರ ಆರ್ಮಿಯಲ್ಲಿ ಹಾಕಿ ಆಟಗಾರನಾಗಿ ರೂಪುಗೊಂಡು ದೇಶವನ್ನು ಪ್ರತಿನಿಧಿಸಿದ್ದಾರೆ. 1971ರಲ್ಲಿ ಭಾರತ ವಿಶ್ವಕಪ್‍ನಲ್ಲಿ ಕಂಚಿನ ಪದಕ ಗೆದ್ದ ಸಂದರ್ಭ ತಂಡದ ಸದಸ್ಯರಾಗಿದ್ದ ಗಣೇಶ್, 1972ರ ಮೂನಿಚ್ ಒಲಿಂಪಿಕ್ಸ್‍ನಲ್ಲಿ ಭಾರತ ಪದಕಗಳಿಸಿದ ಸಂದರ್ಭವೂ ತಂಡದಲ್ಲಿದ್ದರು. 1973ರಲ್ಲಿ ಆರ್ಮಸ್ಟರ್ ಡಾಮ್ ವಿಶ್ವಕಪ್‍ನಲ್ಲಿ ಬೆಳ್ಳಿ ಪದಕ ಗಳಿಸಿದ ಭಾರತ ತಂಡದ ಆಟಗಾರರೂ ಆಗಿದ್ದವರು ಎಂ.ಪಿ. ಗಣೇಶ್.
ರಾಜ್ಯದಲ್ಲಿ ಕ್ರೀಡಾ ಶಾಲೆಯ ರೂವಾರಿ
1982ರಲ್ಲಿ ರಾಜ್ಯದಲ್ಲಿ ಗುಂಡೂರಾವ್ ಅವರ ಅಧಿಕಾರಾವಧಿಯಲ್ಲಿ ಇವರಿಗೆ 10 ಎಕರೆ ಜಾಗ ಹುಟ್ಟೂರಾದ ಸುಂಟಿಕೊಪ್ಪದಲ್ಲಿ ದೊರೆಯುವದರಲ್ಲಿತ್ತು. ಆದರೆ ಇದನ್ನು ನಯವಾಗಿ ತಿರಸ್ಕರಿಸಿದ ಗಣೇಶ್, ರಾಜ್ಯದಲ್ಲಿ ಕ್ರೀಡಾಶಾಲೆ ಸ್ಥಾಪನೆಯ ಬೇಡಿಕೆ ಮುಂದಿರಿಸಿದ್ದ ವ್ಯಕ್ತಿಯಾಗಿ ಕ್ರೀಡಾಶಾಲೆ ಪ್ರಾರಂಭಕ್ಕೆ ಕಾರಣೀಭೂತರಾದವರು ಎಂಬದು ಉಲ್ಲೇಖನೀಯ. ಆರಂಭದಲ್ಲಿ ಕರ್ನಾಟಕ ಯೂತ್ ಸರ್ವೀಸ್ ಸ್ಪೋಟ್ಸ್ ಹಾಸ್ಟೆಲ್ ಎಂದು ಪ್ರಾರಂಭಗೊಂಡ ಕ್ರೀಡಾಶಾಲೆ ನಂತರದ ವರ್ಷಗಳಲ್ಲಿ ಜಿಲ್ಲಾ ಯೂತ್ ಸರ್ವೀಸ್ ಕ್ರೀಡಾಶಾಲೆಯಾಗಿಯೂ ಕಾರ್ಯಾರಂಬಗೊಂಡಿತ್ತು. ಮಡಿಕೇರಿ, ಧಾರವಾಡ ಮತ್ತಿತರ ಕಡೆಗಳಲ್ಲಿ ಸಾಯಿ ಕ್ರೀಡಾ ವಸತಿ ನಿಲಯ ಸ್ಥಾಪನೆ, ಜಿಲ್ಲೆಯ ಹೊದ್ದೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಜಾಗ ಕಲ್ಪಿಸುವಲ್ಲಿ ಪ್ರಧಾನ ಪಾತ್ರವಹಿಸಿರುವ ಗಣೇಶ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ)ಯ ಸಿಇಓ ಆಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ನವದೆಹಲಿಯಲ್ಲಿ ಸಾಯಿ ನ್ಯಾಷನಲ್ ಹಾಕಿ ಅಕಾಡೆಮಿಯ ಸಿ.ಇ.ಓ. ಆಗಿ ಹಾಗೂ ಹೈಫರ್‍ಫಾರ್ಮೆನ್ಸ್ ಡೈರೆಕ್ಟರ್ ಆಫ್ ಸಾಯಿ ಆಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.