ಕುಶಾಲನಗರ, ಸೆ. 14: ಗ್ರಾಮದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯೊಂದನ್ನು ವೀಕ್ಷಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವ್ಯಕ್ತಿಯೊಬ್ಬರು ಪಂಚಾಯಿತಿ ಸದಸ್ಯೆ ಮೇಲೆ ಹಲ್ಲೆ ನಡೆಸಿದ ಘಟನೆ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯೆ ಹೇಮಾವತಿ ಗಾಯಗೊಂಡವರು.ರಸುಲ್‍ಪುರ ಗ್ರಾಮದ ಸಿ.ಕೆ.ಗಣೇಶ್ ಎಂಬವರೇ ಸದಸ್ಯೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಐಟಿಡಿಪಿ ಇಲಾಖೆಗೆ ಸಂಬಂಧಿಸಿದ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಯನ್ನು ಸ್ಥಳೀಯ ಸದಸ್ಯೆ ಹೇಮಾವತಿ ಪರಿಶೀಲಿಸುತ್ತಿದ್ದರು. ಇದಕ್ಕೆ ಆಕ್ಷೇಪಿಸಿದ ಗ್ರಾಮದ ಗಣೇಶ್ ಕಾಮಗಾರಿಯನ್ನು ಪರಿಶೀಲಿಸುವ ಅನಿವಾರ್ಯತೆ ಇಲ್ಲ. ನಿನ್ನ ಕೆಲಸ ನೀನು ಮಾಡಿದರೆ ಸಾಕು ಎಂದು ಸದಸ್ಯೆಯನ್ನು
(ಮೊದಲ ಪುಟದಿಂದ) ಹೀಯಾಳಿಸಿದ್ದಾರೆ. ಇದಕ್ಕೆ ಸದಸ್ಯೆಯ ಪತಿ ವಸಂತ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಸಂಘರ್ಷ ತಾರಕಕ್ಕೆ ಹೋದ ನಂತರ ಗಣೇಶ್ ಕೋವಿಯನ್ನು ತೆಗೆದುಕೊಂಡು ವಸಂತ ಅವರ ಮನೆಗೆ ರಾತ್ರಿ ತೆರಳಿ ಗುಂಡು ಹೊಡೆದು ಕೊಲ್ಲುವದಾಗಿ ಹೆದರಿಸಿದಾಗ ಕೋವಿಯನ್ನು ಸದಸ್ಯೆ ಹೇಮಾವತಿ ಕಿತ್ತುಕೊಂಡಿದ್ದಾರೆ. ನಂತರ ಕೋವಿಯಿಂದ ಸದಸ್ಯೆಗೆ ಹಲ್ಲೆ ಮಾಡಿ ಗಣೇಶ್ ಪರಾರಿಯಾಗಿದ್ದಾರೆ ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಬಳಿಕ ಮಧ್ಯರಾತ್ರಿ 12 ಗಂಟೆಗೆ ಹಲ್ಲೆಗೊಳಗಾದ ಸದಸ್ಯೆ ಹೇಮಾವತಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದಾರೆ. ಬೆಳಿಗ್ಗೆ ವಿಷಯವರಿತ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ.ಎಸ್. ಭಾರತಿ, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಶಶಿಕುಮಾರ್, ಬಿ.ಟಿ.ಪ್ರಸನ್ನ, ಗುಡ್ಡೆಮನೆ ರವಿ, ಡಾಟಿ ಮತ್ತಿತರರು ಧಾವಿಸಿ ಸದಸ್ಯೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.