ಒಡೆಯನಪುರ, ಸೆ. 13: ಪ್ರತಿದಿನ ನೂರಾರು ಬಡ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿರುವ 30 ಹಾಸಿಗೆ ಹೊಂದಿರುವ, 5 ಮಂದಿ ವೈದ್ಯರು ಕರ್ತವ್ಯ ನಿರ್ವಹಿಸಬೇಕಾಗಿರುವ ಸಮೀಪದ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಸಹ ಖಾಯಂ ವೈದ್ಯರಿಲ್ಲದೆ; ವಿವಿಧ ಸಮಸ್ಯೆ ಎದುರಿಸುತ್ತಿದೆ.
ಸಮುದಾಯ ಆರೋಗ್ಯ ಕೇಂದ್ರ 30 ಹಾಸಿಗೆ ಒಳಗೊಂಡಿರುವ ಆಸ್ಪತ್ರೆಯಾಗಿದ್ದು, ಪ್ರತಿದಿನ 150ಕ್ಕಿಂತ ಹೆಚ್ಚಿನ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ, ಸ್ತ್ರೀರೋಗ ತಜ್ಞ, ಆಡಳಿತ ವೈದ್ಯಾಧಿಕಾರಿ ಸೇರಿದಂತೆ ಒಟ್ಟು 5 ತಜ್ಞ ವೈದ್ಯರು ಖಾಯಂ ಆಗಿ ಕರ್ತವ್ಯನಿರ್ವಹಿಸಬೇಕಾದ ಈ ಆಸ್ಪತ್ರೆಯಲ್ಲಿ ಪ್ರಾರಂಭದ ಐದಾರು ವರ್ಷ ಇಬ್ಬರು ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ವರ್ಗಾವಣೆಗೊಂಡ ನಂತರ ಕಳೆದ 3 ವರ್ಷಗಳಿಂದ ಒಬ್ಬ ಆಡಳಿತ ವೈದ್ಯಾಧಿಕಾರಿ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಒಂದು ತಿಂಗಳ ಹಿಂದೆ ವೈದ್ಯರು ಬೇರೆಡೆಗೆ ವರ್ಗಾವಣೆಗೊಂಡಿರುವದ್ದರಿಂದ ಈ ಆಸ್ಪತ್ರೆಗೆ ವೈದ್ಯರಿಲ್ಲದಂತಾಗಿದೆ. ಸದ್ಯಕ್ಕೆ 1 ವರ್ಷದ ಅವಧಿಗೆ ಗ್ರಾಮೀಣ ಸೇವಾ ವೈದ್ಯರೊಬ್ಬರನ್ನು ಆಸ್ಪತ್ರೆಗೆ ನೇಮಿಸಲಾಗಿದ್ದರೂ ಸಹ ಪ್ರಯೋಜನವಾಗುತ್ತಿಲ್ಲ. ಪ್ರತಿದಿನ ಒಳ ರೋಗಿಗಳಿಗೆ ಚಿಕಿತ್ಸೆ ನೀಡುವದು, ತುರ್ತು ಚಿಕಿತ್ಸೆ ಜೊತೆಯಲ್ಲಿ ಗರ್ಭಿಣಿಯರ ಹಾಗೂ ಮಕ್ಕಳ ತಪಾಸಣೆ ಇವುಗಳನ್ನು ಒಬ್ಬ ವೈದ್ಯರು ತಪಾಸಣೆ ನಡೆಸಲು ಸಾಧ್ಯವಾಗುವದಿಲ್ಲ. ಆಲೂರುಸಿದ್ದಾಪುರ ಮತ್ತು ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರು ವಾರದಲ್ಲಿ ಒಂದೊಂದು ದಿನದಂತೆ ಈ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಅನಿವಾರ್ಯತೆ ಎದುರಾಗಿದೆ.
ಖಾಲಿ ಹುದ್ದೆಗಳು: ಆಡಳಿತ ವೈದ್ಯಾಧಿಕಾರಿ, ಸ್ತ್ರೀರೋಗ ತಜ್ಞ, ಅರಳು ತಜ್ಞ, ಫಿಜಿಯಾಲಿಜಿಸ್ಟ್ ಮತ್ತು ಎಂಬಿಬಿಎಸ್ ವೈದ್ಯರೆ ಇಲ್ಲದಂತಾಗಿದೆ. ಇನ್ನುಳಿದಂತೆ ಔಷಧಿ ವಿತರಕ, ಎಕ್ಷರೇ ಟೆಕ್ನಿಶಿಯನ್, ಎಫ್.ಡಿ.ಎ. ಹಾಗೂ ಎಸ್‍ಡಿಸಿ ಹುದ್ದೆ ಖಾಲಿ ಬಿದ್ದಿದೆ. ಒಟ್ಟಾರೆ ವೈದ್ಯರು ಇಲ್ಲದಿರುವ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳ ರೋಗಿಗಳಿಗೆ ನೆಗಡಿ, ಶೀತ ಮುಂತಾದ ಚಿಕ್ಕಪುಟ್ಟ ಕಾಯಿಲೆಗೆ ಚಿಕಿತ್ಸೆ ನೀಡಲು ಹಾಗೂ ಅಪಘಾತದಲ್ಲಿ ಚಿಕ್ಕಪುಟ್ಟ ಗಾಯವಾಗುವ ಸಂದರ್ಭದಲ್ಲೂ ಪ್ರಥಮ ಚಿಕಿತ್ಸೆ ನೀಡಲು ಸಹ ಸಾಧ್ಯವಾಗುತ್ತಿಲ್ಲ. ಸರಕಾರ, ಜನಪ್ರತಿನಿಧಿಗಳು ಈ ಆಸ್ಪತ್ರೆ ಸಮಸ್ಯೆ ಬಗ್ಗೆ ಕಿವಿಗೊಡುತ್ತಿಲ್ಲ. ಆಸ್ಪತ್ರೆ ಸಮಿಪ ಗ್ರಾ.ಪಂ. ಕಸವಿಲೇವಾರಿ ಮಾಡುತ್ತಿರುವದರಿಂದ ಆಸ್ಪತ್ರೆ ವಾತಾವರಣ ಗಬ್ಬೆದ್ದು ನಾರುತ್ತಿದ್ದು, ಜಾಗ ಸಂಪೂರ್ಣವಾಗಿ ಕಾಡುಪೊದೆಗಳಿಂದ ಕೂಡಿದೆ.
ವಿಶೇಷ ವರದಿ: ವಿ.ಸಿ.ಸುರೇಶ್ ಒಡೆಯನಪುರ