ಕುಶಾಲನಗರ, ಸೆ. 13: ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 68ನೇ ವಾರ್ಷಿಕ ಮಹಾಸಭೆ ತಾ. 16 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ. ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು 2018-19ನೇ ಸಾಲಿನಲ್ಲಿ 39.17 ಲಕ್ಷ ರೂ. ಗಳ ನಿವ್ವಳ ಲಾಭ ಹೊಂದಿದೆ. ಒಟ್ಟು 13.88 ಕೋಟಿ ರೂ.ಗಳ ವ್ಯಾಪಾರ ವಹಿವಾಟು ಮಾಡಿದ್ದು ಸಂಘದ ಸದಸ್ಯರಿಗೆ ಈ ಬಾರಿ ಶೇ. 25 ರಷ್ಟು ಡಿವಿಡೆಂಡ್ ನೀಡಲಾಗುವದು ಎಂದು ತಿಳಿಸಿದರು.
ಕಳೆದ 76 ವರ್ಷಗಳಿಂದ ಸಂಘ ಸಾದ್ವಿಕ ಸೇವೆಯನ್ನು ಸದಸ್ಯರಿಗೆ ಹಾಗೂ ಸದಸ್ಯರೇತರಿಗೆ ನೀಡುತ್ತಾ ಜಿಲ್ಲೆಯಲ್ಲಿ ಉತ್ತಮ ವ್ಯವಸಾಯೋತ್ಪನ್ನ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದ ಅವರು ಸಂಘದ ವತಿಯಿಂದ ನಿರ್ಮಾಣಗೊಂಡಿರುವ 500 ಮೆಟ್ರಿಕ್ ಟನ್ ಗೋದಾಮು ಶಿಥಿಲಾವಸ್ಥೆಯಲ್ಲಿದ್ದು ಸಧ್ಯದಲ್ಲಿಯೇ ಇದೇ ಸ್ಥಳದಲ್ಲಿ ಹೈಟೆಕ್ ಮಾದರಿಯ 1 ಸಾವಿರ ಮೆಟ್ರಿಕ್ ಟನ್ ಸಾಮಾಥ್ರ್ಯದ ಗೋದಾಮು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಎಸ್.ಟಿ. ಕೃಷ್ಣರಾಜು ಮಾತನಾಡಿ, ಸೋಮವಾರಪೇಟೆ ತಾಲೂಕಿಗೆ ವಿತರಣೆಯಾಗುವ ಪಡಿತರ ಸಗಟು ನಾಮಿನಿಯಾಗಿ ಕಾರ್ಯ ರ್ವಹಿಸುತ್ತಿದ್ದು 100 ನ್ಯಾಯಬೆಲೆ ಅಂಗಡಿಗೆ ಪಡಿತರ ವಿತರಣೆ ಮಾಡುತ್ತಿದೆ. ಕುಶಾಲನಗರ ಮುಖ್ಯ ರಸ್ತೆಯಲ್ಲಿ ವ್ಯಾಪಾರ ಸಂಕೀರ್ಣ ಹೊಂದಿದ್ದು ಗ್ರಾಹಕರ ಶಾಖೆ, ಸ್ಟೇಷನರಿ, ಗೊಬ್ಬರ, ಕ್ರಿಮಿನಾಶಕ, ಬಿತ್ತನೆಬೀಜ, ಕೋವಿ-ತೋಟ, ಜನತಾ ಬಜಾರ್, ಮೆಡಿಕಲ್ಸ್ ಹಾಗೂ ಎರಡು ಸುಸಜ್ಜಿತ ಸಭಾಂಗಣ, 10 ವಸತಿ ಗೃಹಗಳನ್ನು ಹೊಂದಿರುವದಾಗಿ ತಿಳಿಸಿದರು.
ಸಂಘವು ರು 14.41 ಲಕ್ಷ ಪಾಲು ಬಂಡವಾಳ, 630.50 ಲಕ್ಷ ಠೇವಣಿ, 174.26 ಲಕ್ಷ ನಿಧಿಗಳನ್ನು ಹೊಂದಿದೆ. ರೂ. 569.43 ಲಕ್ಷ ಸಾಲ ನೀಡಲಾಗಿದೆ ಎಂದು ತಿಳಿಸಿದರು. ಸಂಘದ ರೈತ ಸಹಕಾರ ಭವನದ ಆವರಣದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವದರೊಂದಿಗೆ ಮದುವೆ ಮತ್ತಿತರ ಸಮಾರಂಭಗಳಿಗೆ, ಕಾರ್ಯಕ್ರಮಗಳಿಗೆ ಶುದ್ಧ ಕುಡಿವ ನೀರು ಪೂರೈಕೆಗೆ ಯೋಜನೆ ರೂಪಿಸಲಾಗುವದು ಎಂದರು.
ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಸದಸ್ಯರ 10 ನೇ ಮತ್ತು ಪಿಯುಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಮಹಾಸಭೆಯಲ್ಲಿ ನಗದು ಬಹುಮಾನ ವಿತರಿಸಲಾಗುತ್ತಿದೆ. ಸಂಘದ ಬ್ಯಾಂಕಿಂಗ್ ವಿಭಾಗ, ಮೆಡಿಕಲ್ ಮತ್ತು ಗೊಬ್ಬರ ಶಾಖೆಯ ವ್ಯವಹಾರವನ್ನು ಗಣಕೀರಣ ಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘವು 42 ಕಿಲೋ ವ್ಯಾಟ್ ಸಾಮಾಥ್ರ್ಯದ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಹೊಂದಿದ್ದು ತಿಂಗಳೊಂದಕ್ಕೆ ಅಂದಾಜು 30 ಸಾವಿರ ಆದಾಯ ಬರುತ್ತಿದೆ ಎಂದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಹೆಚ್.ಬಿ. ಚಂದ್ರಪ್ಪ, ಟಿ.ಕೆ. ರಘು, ಎ.ಪಿ. ನೀಲಮ್ಮ, ಬಿ. ಸರೋಜ, ಟಿ.ಬಿ. ಜಗದೀಶ್, ಆರ್.ಕೆ. ಚಂದ್ರ, ಬಿ.ಎಂ. ಸೋಮಯ್ಯ, ಕಾರ್ಯದರ್ಶಿ ಬಿ.ಎಂ. ಪಾರ್ವತಿ ಇದ್ದರು.