ಮಡಿಕೇರಿ, ಸೆ. 12: ಕಳೆದ ರಾತ್ರಿ 8.30ರ ಸುಮಾರಿಗೆ ಮಡಿಕೇರಿ - ಸೋಮವಾರಪೇಟೆ ಹೆದ್ದಾರಿಯ ಹಾಲೇರಿಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ಮಣ್ಣು ಕುಸಿತ ದೊಂದಿಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ತುರ್ತಾಗಿ ಸ್ಪಂದಿಸಿರುವ ಲೋಕೋಪಯೋಗಿ ಇಲಾಖೆಯು ಮರ ಹಾಗೂ ಮಣ್ಣು ತೆರವುಗೊಳಿಸಿ ಇಂದು ಬೆಳಗ್ಗಿನ ಜಾವ ವಾಹನ ಸಂಚಾರ ಸುಗಮಗೊಳಿಸಿದೆ.
ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಇಳಿಜಾರು ಪ್ರದೇಶದಲ್ಲಿದ್ದ ಮರ, ಉರುಳಿ ಬಿದ್ದ ಸಂದರ್ಭ ಮಣ್ಣು ಕುಸಿದಿದ್ದು, ಹೆದ್ದಾರಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗದಂತೆ ತ್ವರಿತವಾಗಿ ತೆರವುಗೊಳಿಸಿದ್ದು, ಯಾವದೇ ಸಮಸ್ಯೆ ಎದುರಾಗಿಲ್ಲ ಎಂಬದಾಗಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಇಬ್ರಾಹಿಂ ಅವರು ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ. ನಿನ್ನೆ ತಡರಾತ್ರಿ ಈ ಮಾರ್ಗದಲ್ಲಿ ಅಂಥ ವಾಹನಗಳ ಸಂಚಾರ ಇರಲಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.