ವೀರಾಜಪೇಟೆ, ಸೆ. 12: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚಾಗಿದ್ದು, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಹಿಂಜರಿಯುತ್ತಿದ್ದು, ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯದಿದ್ದರೆ ಗ್ರಾಮಸ್ಥರೆಲ್ಲರೂ ಸೇರಿ ಅರಣ್ಯ ಇಲಾಖೆ ಎದುರು ಅನಿರ್ದಿಷ್ಟಾವಧಿ ಕಾಲ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಗ್ರಾಮದ ಪ್ರಮುಖರಾದ ಪಿ. ರಾಮಚ್ಚ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದಾಜು 1500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ರಾತ್ರಿ ಹಗಲೆನ್ನದೆ ನಿರಂತರವಾಗಿ ಕಾಡಾನೆಗಳು ಹಾವಳಿ ಮಾಡುತ್ತಿದೆ. ಬೆಳೆ ಫಸಲುಗಳೆಲ್ಲವು ಆನೆ ಹಾವಳಿಗೆ ತುತ್ತಾಗುತ್ತಿದೆ. ಅರಣ್ಯ ಇಲಾಖೆಗೆ ದೂರು ನೀಡಿದರೂ ನುಣುಚಿಕೊಂಡು ತಮಗೇನು ಅರಿಯದ ರೀತಿಯಲ್ಲಿ ವರ್ತಿಸುತ್ತಾರೆ. ಕಾಡಾನೆ ಹಾವಳಿಗೆ ಬೇಸತ್ತು ಗ್ರಾಮದ ಶೇ 90ರಷ್ಟು ಮಂದಿ ಭತ್ತದ ಗದ್ದೆ ಮಾಡುವದನ್ನೇ ಬಿಟ್ಟಿದ್ದಾರೆ. ಫಸಲು ನಾಶದ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿದರೆ ಆನೆ ಹಾವಳಿಯಿಂದ ಆದ ನಷ್ಟವನ್ನು ನಾವು ಭರಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆಗೆ ದೂರು ನೀಡಿ ಎಂಬ ಉತ್ತರ ನೀಡುತ್ತಾರೆ ಎಂದು ದೂರಿದರು.

ಕಳೆದ ಮೂರು ತಿಂಗಳ ಹಿಂದೆ ರಸ್ತೆಯಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯನ್ನು ಆನೆ ಅಟ್ಟಿಸಿದೆ ಅದೃಷ್ಟವಶಾತ್ ಗಾಯಗಳೊಂದಿಗೆ ಹುಡುಗ ವಿದ್ಯಾರ್ಥಿ ಪಾರಾಗಿದ್ದಾನೆ ಎಂದರು.

ಗೋಷ್ಠಿಯಲ್ಲಿ ನಾಣಮಂಡ ಕರುಂಬಯ್ಯ, ಪೊನ್ನಕಚ್ಚಿರ ಬಿದ್ದಪ್ಪ, ಬಿ.ಎನ್. ರತನ್, ಪುಡಿಯಂಡ ಅಯ್ಯಪ್ಪ ಇತರ ಗ್ರಾಮಸ್ಥ ಪ್ರಮುಖರು ಉಪಸ್ಥಿತರಿದ್ದರು.