ಮಡಿಕೇರಿ, ಸೆ.12 : ಸುಂದರ ಹಸಿರ ಪರಿಸರದ ಕಾವೇರಿ ನಾಡು ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಉತ್ತಮ ಅವಕಾಶವಿದ್ದು, ಇದಕ್ಕೆ ರಾಜ್ಯ ಸರಕಾರ ಸಹಕಾರ ನೀಡಬೇಕು. ಪ್ರವಾಸೋದ್ಯಮದ ಮೂಲಕವೇ ಸ್ಥಳೀಯ ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಬೇಕೆಂದು ಕೊಡಗು ಟೂರಿಸಂ ಅಸೋಸಿಯೇಷನ್ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿದೆ.
ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಅಸೋಸಿಯೇಷನ್‍ನ ಪ್ರಮುಖರು ಕೋಟ್ಯಂತರ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಕಾವೇರಿ ನದಿ ಹುಟ್ಟುವ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಮತ್ತು ವನ್ಯಜೀವಿಗಳ ದಾಳಿಯಿಂದ ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆಗಳು ಕುಂಠಿತ ಗೊಂಡಿವೆ. ಅತಂತ್ರ ಸ್ಥಿತಿಯಲ್ಲಿರುವ ಇಲ್ಲಿನ ಯುವ ಸಮೂಹ ಪ್ರವಾಸೋದ್ಯಮ ಕ್ಷೇತ್ರದ ಮೂಲಕವೇ ಉದ್ಯೋಗವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗಮನ ಸೆಳೆದರು.
ಜಿಲ್ಲೆಯಲ್ಲಿ ಸಾವಿರಾರು ವಿದ್ಯಾವಂತ ನಿರುದ್ಯೋಗಿ ಯುವಕರಿದ್ದು, ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ. ಕಳೆದ 10 ವರ್ಷಗಳಿಂದ ಕೊಡಗು ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೇಶ, ವಿದೇಶದ ಗಮನ ಸೆಳೆದಿದ್ದು, ಅನೇಕರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡುವಲ್ಲಿ ಈ ಕ್ಷೇತ್ರ ಯಶಸ್ವಿಯಾಗಿದೆ.
ಆದರೆ ಇತ್ತೀಚೆಗೆ ಸುರಿದ ಮಹಾಮಳೆ ಮತ್ತು ಪ್ರವಾಹದ ಪರಿಸ್ಥಿತಿಯಿಂದಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದೆ. ಆದ್ದರಿಂದ ಕೊಡಗು ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಬೇಡಿಕೆಗಳು
ಪ್ರವಾಸೋದ್ಯಮದ ಪುನಶ್ಚೇತನ ಕ್ಕಾಗಿ ಕಳೆದ ವರ್ಷದಂತೆ ಈ ಬಾರಿಯೂ ಕೊಡಗು ಉತ್ಸವವನ್ನು ಆಯೋಜಿಸಬೇಕು. ಪ್ರತೀ ವರ್ಷ ಕೊಡಗು ಉತ್ಸವ ನಡೆಸಲು ಬಜೆಟ್‍ನಲ್ಲಿ ಖಾಯಂ ಆಗಿ 5 ಕೋಟಿ ರೂ. ಗಳಷ್ಟು ಅನುದಾನವನ್ನು ಮೀಸಲಿಡಬೇಕು. ಮಡಿಕೇರಿ ದಸರಾ ಜನೋತ್ಸವ ಸಂದರ್ಭ ಪ್ರವಾಸಿಗರನ್ನು ಆಕರ್ಷಿಸಲು ವಿಶಿಷ್ಟ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು. ಮಹಾಮಳೆಯಿಂದ ಹಾನಿಗೀಡಾ ಗಿರುವ ಪ್ರವಾಸಿತಾಣಗಳನ್ನು ಶೀಘ್ರ ಅಭಿವೃದ್ಧಿ ಪಡಿಸಬೇಕು.
ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುವದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಕೊಡಗಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಮೇಲ್ದರ್ಜೆಗೇರಿಸಲು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಕೊಡಗು ಅತಿ ಹೆಚ್ಚು ಮಳೆಯಾಗುವ ಪ್ರದೇಶವಾಗಿರು ವದರಿಂದ ಮತ್ತು ಬೆಟ್ಟಗುಡ್ಡಗಳಿಂದ ಕೂಡಿರುವದರಿಂದ ಇಲ್ಲಿನ ರಸ್ತೆಗಳು ಪ್ರತಿ ಮಳೆಗಾಲದಲ್ಲಿ ಕುಸಿಯುವದು ಸಾಮಾನ್ಯವಾಗಿದೆ. ಈ ಹಾನಿ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೊಡಗಿನ ಎಲ್ಲಾ ಪ್ರಮುಖ ರಸ್ತೆಗಳನ್ನು ಸಂರಕ್ಷಿಸಿಕೊಳ್ಳುವದಕ್ಕಾಗಿ ವೈಜ್ಞಾನಿಕ ರೂಪದಲ್ಲಿ ತಡೆಗೋಡೆಗಳನ್ನು ನಿರ್ಮಿಸಲು ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಬೇಕು.
ಮಡಿಕೇರಿ ನಗರದ ಹಳೆ ಖಾಸಗಿ ಬಸ್ ನಿಲ್ದಾಣವಿದ್ದ ಪ್ರದೇಶದಲ್ಲಿ ‘ಮಡಿಕೇರಿ ಸ್ಕ್ವಯರ್’ ಯೋಜನೆ ಯನ್ನು ಅನುಷ್ಠಾನಗೊಳಿಸಲು ಈಗಾಗಲೇ ಅನುದಾನ ಮಂಜೂರಾಗಿದೆ. ಈ ಕಾಮಗಾರಿ ಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೊಡಗಿನ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕೊಡವ ಹೆರಿಟೇಜ್ ಸೆಂಟರ್ ಯೋಜನೆಯ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಇದನ್ನು ಶೀಘ್ರ ಪೂರ್ಣ ಗೊಳಿಸಲು ಸೂಚನೆ ನೀಡಬೇಕು.
ಹೆಸರುವಾಸಿ ಪ್ರವಾಸಿತಾಣ ಗಳಿರುವ ಪ್ರದೇಶದಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಮತ್ತು ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆಯನ್ನು ಮಾಡಬೇಕು.
ಕೊಡಗು ಪ್ರವಾಸೋದ್ಯಮ ಇಲಾಖೆಗೆ ಖಾಯಂ ಅಧಿಕಾರಿಯೊಬ್ಬ ರನ್ನು ನೇಮಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಅಸೋಸಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ, ಪ್ರಮುಖರಾದ ಮಾದೇಟಿರ ತಿಮ್ಮಯ್ಯ, ಬಿ.ಎನ್.ಪ್ರಕಾಶ್, ಜಿ. ಚಿದ್ವಿಲಾಸ್, ಎಂ.ಪಿ.ಕೇಶವ ಕಾಮತ್, ಮಾಣೀರ ಮುತ್ತಪ್ಪ, ಅತಿಥಿ ಭಾಸ್ಕರ್ ಮತ್ತಿತರರು ಸಚಿವ ಸಿ.ಟಿ.ರವಿ ಅವರಿಗೆ ನೀಡಿದರು.