ಪೆರಾಜೆ, ಸೆ. 12 : ಕ್ರೀಡೆಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಮಕ್ಕಳ ಬುದ್ಧಿ ಮತ್ತು ದೇಹದ ಸದೃಢ ಬೆಳವಣಿಗೆಗೆ ಕ್ರೀಡೆ ಸಹಕಾರಿ; ಕ್ರೀಡೆಯಿಂದ ಮಾತ್ರ ಧೈರ್ಯ, ಸ್ಥೈರ್ಯ, ಮತ್ತು ಸ್ನೇಹ ಸೌರ್ಹಾದತೆ ಸಾಧ್ಯ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.

ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಪೆರಾಜೆ ಜ್ಯೋತಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಪೆರಾಜೆ ಜ್ಯೋತಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆರಂಭಗೊಂಡ ಮಡಿಕೇರಿ ತಾಲೂಕು ಮಟ್ಟದ ಅಂತರ ಪ್ರಾಥಮಿಕ-ಪ್ರೌಢಶಾಲಾ ಕ್ರೀಡಾಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಆರೋಗ್ಯ ತುಂಬಾ ಮುಖ್ಯ. ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಂಡರೆ ಆತನ ಆರೋಗ್ಯವೃದ್ಧಿ ಕ್ರೀಡೆಯ ಮೂಲಕ ಆಗುತ್ತದೆ. ವಿದ್ಯಾರ್ಥಿಗಳು ಕೇವಲ ತರಗತಿಯೊಳಗಿನ ಪಠ್ಯ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಉತ್ತಮ ಕ್ರೀಡಾಪಟುಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಎಂದು ಹೇಳಿದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಆಟಗಳಿಗೆ ಬಲಿಯಾಗದೇ ನಮ್ಮ ದೇಹಕ್ಕೆ ವ್ಯಾಯಾಮ ಕೊಡುವಂತಹ ಆಟಗಳ ಕಡೆಗೆ ಗಮನ ನೀಡಬೇಕು. ಮಕ್ಕಳಲ್ಲಿ ಕ್ರೀಡಾಭಿಮಾನ, ಕ್ರೀಡಾಸಕ್ತಿಯನ್ನು ಬೆಳೆಸುವ ಮೂಲಕ ಉತ್ತಮ ಕ್ರೀಡಾಪಟುಗಳ ಉದಯಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಕ್ರೀಡಾ ಧ್ವಜಾರೋಹಣವನ್ನು ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ನೆರವೇರಿಸಿದರು. ಪೆರಾಜೆ ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಡಾ. ಜ್ಞಾನೇಶ್ ಎನ್.ಎ ಗೌರವ ವಂದನೆ ಸ್ವೀಕರಿಸಿದರು. ಕ್ರೀಡಾಜ್ಯೋತಿಯನ್ನು ಪೆರಾಜೆ ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ ಧರಣಿಧರ ಪ್ರಜ್ವಲಿಸಿದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀ ಪಿ., ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತಮ್ಮಯ್ಯ ಎಂ.ಎಸ್, ಮಡಿಕೇರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣೇಶ್ ಬಿ.ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಮೋಹನ್ ಪೆರಾಜೆ, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ಜ್ಯೋತಿ ವಿದ್ಯಾಸಂಘದ ಸಂಚಾಲಕ ಎಂ.ಟಿ. ಹರೀಶ್ಚಂದ್ರ, ಜ್ಯೋತಿ ಪ್ರೌಢಶಾಲಾ ಮುಖ್ಯ ಶಿಕ್ಷಕ ದೊಡ್ಡಣ್ಣ ಬಿ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಚಂದ್ರ ಕೆ. ಕೆ. ಶ್ರೀ ಶಾಸ್ತಾವು ದೇವಸ್ಥಾನ ಆಡಳಿತ ಮೊಕ್ತೆ ವಿಶ್ವನಾಥ ಕುಂಬಳಚೇರಿ, ಮಾಜಿ ಸಂಚಾಲಕ ಪದ್ಮಯ್ಯ ಕುಂಬಳಚೇರಿ, ನಿವೃತ್ತ ಮುಖ್ಯೋಪಾಧ್ಯಾಯ ಪುರುಷೋತ್ತಮ ಕಿರ್ಲಾಯ, ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸದಸ್ಯ ಪ್ರಕಾಶ್ ದೊಡ್ಡಡ್ಕ, ಕೃಷ್ಣಪ್ಪ ಕೊಳಂಗಾಯತ ಉಪಸ್ಥಿತರಿದ್ದರು. ಹರಿಶ್ಚಂದ್ರ ಮಡ್ಕಜೆ ಸ್ವಾಗತಿಸಿದರು. ಶಿಕ್ಷಕಿಯರಾದ ರೇಖಾ ಮೋಹನ್ ಪೆರುಮುಂಡ, ಚಂದ್ರವತಿ ನಿರೂಪಿಸಿದರು. ದೊಡ್ಡಣ್ಣ ಬರೆಮೇಲು ವಂದಿಸಿದರು. ಬಳಿಕ ವಿವಿಧ ಕ್ರೀಡಾಕೂಟ ನಡೆದವು.

ವರದಿ:ಗಿರೀಶ್, ಪೆರಾಜೆ, ಕಿರಣ್ ಕುಂಬಳಚೇರಿ