ಮಡಿಕೇರಿ, ಸೆ. 12: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರಿನ ನಲಿಕಲಿ ಘಟಕಕ್ಕೆ 2018-19ನೇ ಸಾಲಿನ ಅತ್ಯುತ್ತಮ ನಲಿಕಲಿ ಶಾಲೆ ಪ್ರಶಸ್ತಿ ಲಭಿಸಿದೆ 2017-18 ಮತ್ತು 2018-19ರಲ್ಲಿ ಜಿಲ್ಲೆಯ ವಿವಿಧ ನಲಿಕಲಿ ಶಾಲೆಗಳಲ್ಲಿ ಮೈಕ್ರೋ ಮತ್ತು ಮ್ಯಾಕ್ರೋ ಅಧ್ಯಯನ ಕೈಗೊಳ್ಳಲಾಗಿತ್ತು. ನಲಿಕಲಿ ಕೊಠಡಿ ತಯಾರಿ, ಕಲಿಕಾ ಚಟುವಟಿಕೆಗಳ ಆಯೋಜನೆ, ಯೋಜನಾ ಕಾರ್ಯ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಗುಂಪು ಚಲನಾ ಚಟುವಟಿಕಾ ಕಾರ್ಯ, ಹೀಗೆ ಹಲವು ಕ್ಷೇತ್ರಗಳ ಮೌಲ್ಯಮಾಪನ ಮಾಡಿ ಶೇ. 100 ಫಲಿತಾಂಶ ಬಂದ ಶಾಲೆಗಳನ್ನು ಕರ್ನಾಟಕದ ಪ್ರತಿ ತಾಲೂಕಿನಿಂದ 3 ಉತ್ತಮ ಶಾಲೆಗಳನ್ನು ಆಯ್ದು ಪ್ರಶಸ್ತಿ ನೀಡಲಾಗುತ್ತಿದೆ.

ಸೋಮವಾರಪೇಟೆ ತಾಲೂಕಿನಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದಪಟ್ಟಣ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸತೋಟ ಅತ್ಯುತ್ತಮ ನಲಿಕಲಿ ಶಾಲೆಗಳಾಗಿ ಹೊರಹೊಮ್ಮಿವೆ. ಹೀಗೆ ಆಯ್ಕೆಯಾದ ಶಾಲೆಗಳಿಗೆ ಐದು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ.