ಸೋಮವಾರಪೇಟೆ, ಸೆ. 12: ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ಸರಬರಾಜು ಯೋಜನೆ ಇಲಾಖೆ ಮತ್ತು ಸೆಸ್ಕ್ ಇಲಾಖೆಯ ನಡುವೆ ಕಾಮಗಾರಿಗೆ ಸಂಬಂಧಿಸಿದಂತೆ ಸಮನ್ವಯತೆ ಇಲ್ಲದಿರುವದರಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂದು ತಾಲೂಕು ಕೆಡಿಪಿ ಸಭೆಯಲ್ಲಿ ಚರ್ಚೆ ನಡೆಯಿತು.

ಇಲ್ಲಿನ ತಾ.ಪಂ.ಯ ಪ್ರಗತಿ ಪರಿಶೀಲನೆ ಸಭೆ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಎರಡೂ ಇಲಾಖೆಗಳ ನಡುವೆ ಸಮನ್ವಯ ಹಾಗೂ ಮಾಹಿತಿ ಕೊರತೆ ಇರುವದರಿಂದ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಗ್ರಾಮೀಣ ಭಾಗದ ಜನರು ಮಳೆಗಾಲದಲ್ಲಿ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ ಎಂದು ಅಧ್ಯಕ್ಷೆ ಪುಷ್ಪಾ ರಾಜೇಶ್ ಮತ್ತು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರುಗಳು ಸಭೆಗೆ ತಿಳಿಸಿದರು.

ಮುಂದಿನ ಸಭೆಗೆ ಯೋಜನೆಗೆ ಸಂಬಂಧಿಸಿದಂತೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕೆಂದು ನೀರಾವರಿ ಇಲಾಖೆ ಅಭಿಯಂತರ ರಮೇಶ್ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು.

ತಾಲೂಕಿನ ಮದಲಾಪುರ ಮೇಕೆ ಹಾಲು ಉತ್ಪಾದನಾ ಘಟಕ ಮೂರು ವರ್ಷದ ಹಿಂದೆಯೇ ಪ್ರಾರಂಭ ಗೊಂಡಿದ್ದು, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿನ ಕಾಮಗಾರಿ ಕೂಡ ಗುಣಮಟ್ಟದಿಂದ ಕೂಡಿಲ್ಲ ಎಂದು ಅಭಿಮನ್ಯುಕುಮಾರ್ ಆರೋಪಿಸಿದರು.

ಮದÀಲಾಪುರದಲ್ಲಿ ಮೇಕೆ ಹಾಲು ಉತ್ಪಾದನ ಘಟಕಕ್ಕೆ 2016-17 ರಲ್ಲಿ ಚಾಲನೆ ನೀಡಲಾಗಿದೆ. ಸುಮಾರು 112 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಸುತ್ತಲೂ ಬೇಲಿ ಹಾಕಲಾಗಿದೆ. ಇಲ್ಲಿ ಕಾಮಗಾರಿ ನಡೆಸುತ್ತಿರುವ ಮಡಿಕೇರಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಯಾವದೇ ಮಾಹಿತಿ ನೀಡಿಲ್ಲ ಎಂದು ಅವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕÀ ಬದಾಮಿ, 2017-18 ರಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಶೇ. 80ರಷ್ಟು ಕಾಮಗಾರಿ ಮಗಿದಿದೆ. ಒಟ್ಟು 50 ರಿಂದ 60 ಎಕರೆ ಜಾಗದಲ್ಲಿ ಮೇಕೆಗಳಿಗೆ ಮೇವು ಬೆಳೆಯಲು ಸ್ಥಳಾವಕಾಶ ಇದೆ. ಸುಮಾರು 200 ಹೆಣ್ಣು ಮತ್ತು 8 ಗಂಡು ಮೇಕೆಗಳನ್ನು ಘಟಕದಲ್ಲಿ ಪೋಷಣೆ ಮಾಡಲಾಗು ವದು ಎಂದು ಯೋಜನೆಯ ಬಗ್ಗೆ ವಿವರಿಸಿದರು.

ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಜನಪ್ರತಿ ನಿಧಿಗಳು ಹಾಗೂ ಜನಸಾಮಾನ್ಯ ರೊಂದಿಗೆ ಅನುಚಿತವಾಗಿ ವರ್ತಿಸು ತ್ತಾರೆ. ತಕ್ಷಣವೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಮೇಲಧಿಕಾರಿ ಗಳಿಗೆ ಪತ್ರವನ್ನು ಬರೆಯುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಅಭಿಮನ್ಯುಕುಮಾರ್ ಸೂಚಿಸಿದರು.

ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಆಹಾರ ಸರಬರಾಜು ಆಗುತ್ತಿಲ್ಲ. ಗುಮ್ಮನಕೊಲ್ಲಿ ಅಂಗನವಾಡಿ ಕೇಂದ್ರದಲ್ಲಿ 6 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಆದರೆ ದಾಖಲು ಪುಸ್ತಕದಲ್ಲಿ 21 ವಿದ್ಯಾರ್ಥಿಗಳು ಎಂದು ನಮೂದಿಸ ಲಾಗಿದೆ. ಪ್ರಬಾರ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿ ಬಂದು, ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು.

ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೊರತೆಯಿಂದ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿ ಸರಕಾರಿ ಪ್ರಾಥಮಿಕ ಶಾಲೆ ಮುಚ್ಚಲ್ಪಟ್ಟಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಸಭೆಯ ಗಮನಕ್ಕೆ ತಂದರು.

ಸೋಮವಾರಪೇಟೆಯಲ್ಲಿರುವ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಮಹಿಳಾ ವಾರ್ಡನ್ ನೇಮಿಸಬೇಕೆಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ತಂಗಮ್ಮ ಅವರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಶೇಖರ್, ಶಾಲೆಯಲ್ಲಿ ಪ್ರಾಂಶುಪಾಲರನ್ನು ಹೊರತು ಪಡಿಸಿ ಉಳಿದ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ಗಳು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ತಕ್ಷಣಕ್ಕೆ ಯಾವ ಬದಲಾವಣೆಯನ್ನೂ ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸಭೆಯ ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ್ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.