ವೀರಾಜಪೇಟೆ, ಸೆ.12: ದೇವಣಗೇರಿ ಗ್ರಾಮದ ಸಣ್ಣುವಂಡ ಸಿ.ಮಂದಪ್ಪ ಎಂಬವರಿಗೆ ಸೇರಿದ ಆಸ್ತಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಾಲ್ಕು ಮಂದಿಯ ಹೆಸರಿಗೆ ವರ್ಗಾಯಿಸಿದ ಆರೋಪದ ಮೇರೆ; ವೀರಾಜಪೇಟೆ ಗ್ರಾಮಾಂತರ ಪೊಲೀಸರು ರೆವಿನ್ಯೂ ಇನ್ಸ್‍ಪೆಕ್ಟರ್, ಸರ್ವೆಯರ್ ಸೇರಿದಂತೆ ಆರು ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ದೇವಣಗೇರಿ ಗ್ರಾಮದ ಮಂದಪ್ಪ ಅವರಿಗೆ ಸೇರಿದ 271/1 ಆಸ್ತಿಗೆ ಅವರ ಕುಟುಂಬದ ಸಣ್ಣುವಂಡ ಅಪ್ಪಚ್ಚು, ತಿಮ್ಮಯ್ಯ, ಅಯ್ಯಪ್ಪ ಹಾಗೂ ನಾಣಯ್ಯ ಇವರುಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ; ವಿಭಾಗ ಪತ್ರ ಮಾಡಿ ಅಕ್ರಮವಾಗಿ ವರ್ಗಾಯಿಸಿಕೊಂಡ ಆರೋಪದ ಮೇರೆ; ಮಂದಪ್ಪ ಇಲ್ಲಿನ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರಿಂದ ನ್ಯಾಯಾಧೀಶರು ಪ್ರಕರಣದ ಕುರಿತು ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದ್ದರು.

ಮಂದಪ್ಪ ಅವರ ಆಸ್ತಿಗೆ ಸಂಬಂಧಿಸಿದಂತೆ ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿಭಾಗ ಪತ್ರ ತಯಾರಿಸಲು ಸಹಕರಿಸಿದ ವೀರಾಜಪೇಟೆ ತಾಲೂಕು ಕಚೇರಿಯ ಆಗಿನ ರೆವಿನ್ಯೂ ಇನ್ಸ್‍ಪೆಕ್ಟರ್ ಎಂ.ಕೆ. ಶಿವಪ್ಪ. ಸರ್ವೆಯರ್ ಕೆಂಡಗಣ್ಣಪ್ಪ ವಿರುದ್ಧವೂ ಐ.ಪಿ.ಸಿ.1860, (ಯು/ಎಸ್-441, 464, 468, 420) ಪ್ರಕಾರ ಪ್ರಕರಣ ದಾಖಲಿಸಿದ್ದು, ತಾ.16-7-2018 ರಿಂದ 4-09-2019ರವರೆಗೆ ಈ ಕೃತ್ಯ ನಡೆದಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ. (ಎಫ್ ಐ ಆರ್ ನಂ 0068/2019 ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ)