ಕುಶಾಲನಗರ, ಸೆ. 10: ಕುಶಾಲನಗರದ ಪಟ್ಟಣ ಹೃದಯ ಭಾಗದಲ್ಲಿದ್ದ ಶಿಥಿಲಗೊಂಡ ಕಟ್ಟಡವನ್ನು ಪಟ್ಟಣ ಪಂಚಾಯ್ತಿ ತೆರವುಗೊಳಿಸಲು ಕ್ರಮಕೈಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ಅಪಾಯವನ್ನು ಆಹ್ವಾನಿಸುತ್ತಿದ್ದ ಈ ಕಟ್ಟಡದ ಭಾಗಗಳು ಕುಸಿಯುವ ಮೂಲಕ ನಾಗರಿಕರಿಗೆ ಆತಂಕ ಉಂಟುಮಾಡಿತ್ತು. ಕಟ್ಟಡದ ಬಗ್ಗೆ ವ್ಯಾಜ್ಯವೊಂದು ನ್ಯಾಯಾಲಯದಲ್ಲಿ ಇರುವ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು.

ಮುಖ್ಯರಸ್ತೆಯ ಒತ್ತಿನಲ್ಲಿ ಕಟ್ಟಡ ಇದ್ದು ಬಡಾವಣೆಗಳಿಗೆ ತೆರಳುವ ಜನರು ಕಟ್ಟಡವನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಪ.ಪಂ.ಅಧಿಕಾರಿಗಳು ಸೋಮವಾರ ತಡರಾತ್ರಿಯಲ್ಲಿ ಕಟ್ಟಡವನ್ನು ತೆರವುಗೊಳಿಸಿ ಎದುರಾಗಲಿದ್ದ ಅಪಾಯವನ್ನು ತಡೆಗಟ್ಟಿದ್ದಾರೆ.