ಪೆರಾಜೆ, ಸೆ. 10: ಯುವ ಕೋಟೆ ಯುವಕಮಂಡಲ ಪುತ್ಯ ಪೆರಾಜೆ ಇದರ ವತಿಯಿಂದ ಪ್ರತಿ ತಿಂಗಳು ನಡೆಯುವ ಶ್ರಮದಾನವು ಈ ಬಾರಿ ಪೆರಾಜೆಯಿಂದ ವ್ಯಾಪಾರೆ ಗಡಿವರೆಗಿನ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವದರ ಮೂಲಕ ಯಶಸ್ವಿ ಗೊಳಿಸಲಾಯಿತು.

ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತಿದ್ದು, ಯುವಕ ಮಂಡಲದ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರಮದಾನದಲ್ಲಿ ಸದಸ್ಯರಿಗೆ ಮನೋಜ್ ನಿಡ್ಯಮಲೆ ತಂಪು ಪಾನೀಯ, ಶುಭಾಶ್ ಬಂಗಾರ ಕೋಡಿ, ಪದ್ಮನಾಭ ವ್ಯಾಪಾರೆ, ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಗುಂಡಿಮುಚ್ಚಲು ಕಲ್ಲುಗಳನ್ನು ಮುಳ್ಯದ ಸದಾನಂದ ಮತ್ತು ವಿಜಯ ನಿಡ್ಯಮಲೆ ನೀಡಿದರು. ಚರಣ್ ಬಂಗಾರಕೋಡಿ ಮತ್ತು ಚಂದ್ರಶೇಖರ್ ಬಂಗಾರಕೋಡಿ ಕಲ್ಲುಗಳನ್ನು ತರಲು ಪಿಕ್ ಅಪ್ ನೀಡಿ ಸಹಕರಿಸಿದರು.

ಈ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಚಿನ್ನಪ್ಪ ಅಡ್ಕ, ಯುವ ಕೋಟೆ ಯುವಕಮಂಡಲದ ಅಧ್ಯಕ್ಷ ಲಿಖಿನ್ ಅಡ್ಕ, ಕಾರ್ಯದರ್ಶಿ ಕೌಶಿಕ್ ತೊಕ್ಕುಳಿ, ಸದಸ್ಯರುಗಳು ಭಾಗವಹಿಸಿದ್ದರು.

-ಕಿರಣ್ ಕುಂಬಳಚೇರಿ