ಭಾಗಮಂಡಲ, ಸೆ. 11: ತಲಕಾವೇರಿಯಲ್ಲಿ ಇಂದು ಜಿಲ್ಲೆಯ ಕೆಲವು ಭಕ್ತಾದಿಗಳಿಂದ ಸಾಮೂಹಿಕ ಪ್ರ್ರಾರ್ಥನೆ ನಡೆಸಲಾಯಿತು. ಕಳೆದ ವರ್ಷದಿಂದ ಆರಂಭಗೊಂಡು ಜಿಲ್ಲೆ ಯಲ್ಲಿ ಮತ್ತು ರಾಜ್ಯದಲ್ಲಿ ಮಳೆಗಾಲ ಸಂದರ್ಭ ಸಂಭವಿಸಿದ ಪ್ರಾಕೃತಿಕ ವಿಕೋಪದ ದುಷ್ಪರಿಣಾಮಗಳ ಹಿನ್ನೆಲೆ ಯಲ್ಲಿ ಈ ಪ್ರಾರ್ಥನೆ ನಡೆಸಲಾಯಿತು.
ಜಿಲ್ಲೆಯಲ್ಲಿ ಭೂಕುಸಿತ, ಪ್ರವಾಹ, ಮಾನವ ಪ್ರಾಣ ಹಾನಿ, ಆಸ್ತಿ ಹಾನಿ ಸಂಭವಿಸಿದ್ದು ಜನರು ತತ್ತÀರಿಸಿ ಹೋಗಿದ್ದಾರೆ. ಭವಿಷ್ಯ ಜೀವನದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಕೊಡಗಿನ ಕುಲದೈವವೆನಿಸಿರುವ ರಾಷ್ಟ್ರೀಯ ಜೀವನದಿ ಕಾವೇರಿ ಸನ್ನಿಧಿಯಲ್ಲಿ ಸೇರಿ ಕೊಡಗಿನ ಮತ್ತು ನಾಡಿನ ದುರಂತಗಳು ಸ್ಥಗಿತಗೊಳ್ಳುವಂತೆ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು, ಮುಂದಿನ ದಿನಗಳಲ್ಲಿ ಜನರು ನೆಮ್ಮದಿಯಿಂದ ಜೀವನ ನಡೆಸಲು ಅನುಗ್ರಹಿಸಬೇಕೆಂದು ಕಾವೇರಿ ಸನ್ನಿಧಿಯಲ್ಲಿ, ಮಹಾಗಣಪತಿ ಮತ್ತು ಅಗಸ್ತ್ಯೇಶ್ವರ ದೇಗುಲಗಳ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಲಾಯಿತು.
ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನು ಪ್ರಶಾಂತಾಚಾರ್ ನೆರವೇರಿಸಿದರು. ಟಿ.ಎಸ್ ನಾರಾಯಣಾಚಾರ್ ಸಹಕರಿಸಿದರು. ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಪ್ರಾರ್ಥಿಸಿದರು. ಈ ಸಂದರ್ಭ ಪ್ರ್ರಾರ್ಥನಾ ಕಾರ್ಯಕ್ರಮವನ್ನು ಆಯೋಜಿಸಿದ ಕುದುಕುಳಿ ಭರತ್ ಸೇರಿದಂತೆ, ಮಂಡೀರ ದೇವಿ ಪೂಣಚ್ಚ, ಕಾಳನ ರವಿ, ಉಮಾಪ್ರಭು, ಕುದುಪಜೆ ಪಳಂಗಪ್ಪ, ದಾಸಪ್ಪ, ಕುಡಿಯರ ಮುತ್ತಪ್ಪ, ದೇವಂಗೋಡಿ ಹರೀಶ್, ಹೊಸಗದ್ದೆ ಭಾಸ್ಕರ್, ಎಂ.ಬಿ. ದೇವಯ್ಯ ಹಾಗೂ ಇನ್ನಿತರ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಅಲ್ಲದೆ, ಜಿ. ರಾಜೇಂದ್ರ ಸಾಮೂಹಿಕ ಪ್ರಾರ್ಥನೆಯನ್ನು ನೆರೆದವರೊಂದಿಗೆ ಮಾಡಿಸಿದರು. - ಸುನಿಲ್