ಗೋಣಿಕೊಪ್ಪ ವರದಿ, ಸೆ. 10: ಆಸ್ತಿ ವೈಷಮ್ಯದಲ್ಲಿ ತಮ್ಮನಿಂದ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಾನೂರು ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಚೊಟ್ಟೆಕ್‍ಮಾಡ ಪ್ರಕಾಶ್ ಚಿಟ್ಯಪ್ಪ (60) ಗಾಯಗೊಂಡು ಜೀವನ್ಮರಣ ಸ್ಥಿತಿಯಿಂದ ಸ್ವಲ್ಪ ಚೇತರಿಸಿಕೊಂಡಿದ್ದಾರೆ.

ಪ್ರಕಾಶ್ ಅವರ ತಮ್ಮ ಅಪ್ಪು ಕರುಂಬಯ್ಯ ಅವರಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಬಗ್ಗೆ ಪ್ರಜ್ಞಾವಸ್ಥೆಗೆ ಬಂದಿರುವ ಪ್ರಕಾಶ್ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಾರೆ. ಪ್ರಕಾಶ್ ಮೈಸೂರು ಜೆಎಸ್ ಎಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತಲೆ, ಬೆನ್ನು, ಕಾಲಿನ ಭಾಗಕ್ಕೆ ಕತ್ತಿಯಿಂದ ಪೆಟ್ಟಾಗಿದೆ.

ವಿವರ: ಇಂದು ಪ್ರಕಾಶ್ ಚಿಟ್ಯಪ್ಪ ಹಾಲು ತೆಗೆದುಕೊಂಡು ಬರುತ್ತಿದ್ದಾಗ ತೋಟದ ಮರೆಯಿಂದ ಕಾದು ಕುಳಿತಿದ್ದ ಕರುಂಬಯ್ಯ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ತಲೆಗೆ ಗಂಭೀರ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಡವಾಗಿಯೂ ಮನೆಗೆ ಬಾರದ ಕಾರಣ ಪ್ರಕಾಶ್ ಅವರ ಅಣ್ಣ ಹುಡುಕುವಾಗ ರಸ್ತೆಯಲ್ಲಿ ಬಿದ್ದಿರುವದು ಕಂಡು ಬಂದಿದೆ. ತಕ್ಷಣ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಯಿತು. ತಲೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮತ್ತೆ ಪ್ರಜ್ಞಾವಸ್ಥೆಗೆ ಬಂದಿರುವ ಪ್ರಕಾಶ್ ಕತ್ತಿಯಿಂದ ದಾಳಿ ಮಾಡಿರುವ ಬಗ್ಗೆ ಕುಟುಂಬಸ್ತರಿಗೆ ಮಾಹಿತಿ ನೀಡಿದ್ದಾರೆ. ಪೊನ್ನಂಪೇಟೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಆಸ್ತಿ ವಿಚಾರವಾಗಿ ಕೊಲೆಯತ್ನ ನಡೆದಿದೆ ಎಂದು ಪ್ರಕಾಶ್ ಅವರ ಪತ್ನಿ ರಾಣಿ ದೂರು ನೀಡಿದ್ದಾರೆ. -ಸುದ್ದಿಪುತ್ರ