ಮಡಿಕೇರಿ, ಸೆ. 11: ರಾಜ್ಯಾದ್ಯಂತ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ವಾಹನ ಸವಾರರು ಪಾಲಿಸುವಂತೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸುತ್ತಿದೆ.

ಅದರಂತೆ ಕೊಡಗಿನಲ್ಲೂ ಕೂಡ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಚಾಲಕರಿಗೆ ಪೊಲೀಸರು ಮುಲಾಜಿಲ್ಲದೆ ದಂಡ ವಿಧಿಸುತ್ತಿದ್ದು, ಸೆ. 1 ರಿಂದ 9 ರವರೆಗೆ ಒಂಭತ್ತು ದಿನಗಳ ಅವಧಿಯಲ್ಲಿ ಹೆಲ್ಮೆಟ್ ರಹಿತ ವಾಹನ ಚಾಲನೆ, ಅಸಮರ್ಪಕ ಪಾರ್ಕಿಂಗ್, ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ಇತ್ಯಾದಿ ಅಪರಾಧಗಳ ಒಟ್ಟು 390 ಪ್ರಕರಣಗಳನ್ನು ದಾಖಲು ಮಾಡಿದ್ದು, ರೂ. 3,46,000 ದಂಡ ವಿಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ‘ಶಕ್ತಿ’ಗೆ ತಿಳಿಸಿದ್ದಾರೆ.