ಮಡಿಕೇರಿ, ಸೆ. 11: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ; ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ಕಲ್ಪಿಸುವಲ್ಲಿ; ಅರ್ಹರಿಗೆ ಸದ್ಭಳಕೆ ಆಗಬೇಕೆಂದು ಸಂಬಂಧಿಸಿದ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಇಂದು ಜಿಲ್ಲಾಡಳಿತ ಭವನದಲ್ಲಿ ಜರುಗಿದ ಸಭೆಯಲ್ಲಿ; ಈ ಸಂಬಂಧ ವಿಷಯ ಪ್ರಸ್ತಾಪಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್; ಒಂದೇ ಕುಟುಂಬದ ಇಬ್ಬರು ಸೋದರರಿಗೆ ಎರಡು ವಾಹನ ನೀಡಲಾಗಿದೆ ಎಂದು ಬಹಿರಂಗಗೊಳಿಸಿದ್ದು, ಅಲ್ಲದೆ ಅರ್ಹರಿಗೆ ಸೌಲಭ್ಯ ಒದಗಿಸಲು ತಿಳಿ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿ ರಾಘವೇಂದ್ರ ಇಲಾಖೆಯಿಂದ ಬೇಡಿಕೆಗೆ ತಕ್ಕಂತೆ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುತ್ತಿರುವದಾಗಿ ಮಾಹಿತಿಯಿತ್ತರು. ಸಚಿವ ಸಿ.ಟಿ. ರವಿ ಅವರು ವಿವರಣೆ ಪಡೆದು, (ಮೊದಲ ಪುಟದಿಂದ) ಕೇವಲ ಪ್ರವಾಸಿ ವಾಹನಕ್ಕೆ ಯೋಜನೆ ಸೀಮಿತಗೊಳಿಸದೆ; ಟ್ಯಾಕ್ಸಿಗಳ ಹೊರತಾಗಿ ಕ್ಯಾಂಟೀನ್ ಸೌಲಭ್ಯ, ಮಳಿಗೆಗಳು, ಇನ್ನಿತರ ಪೂರಕ ಸೌಲಭ್ಯದೊಂದಿಗೆ ಉದ್ಯೋಗ ಕಂಡುಕೊಳ್ಳಲು ಪ್ರೋತ್ಸಾಹಿಸಬೇಕೆಂದು ಆದೇಶಿಸಿದರು.
ಅರಣ್ಯಾಧಿಕಾರಿಗಳಿಗೆ ಮಾತಿನ ಚಾಟಿ : ಇರ್ಪು, ದುಬಾರೆ, ನಿಸರ್ಗಧಾಮ ಮುಂತಾದೆಡೆಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಇಲಾಖೆಯಿಂದ ತೊಡಕುಗಳು ಎದುರಾಗುತ್ತಿರುವ ಬಗ್ಗೆ; ಸಚಿವರ ಗಮನಕ್ಕೆ ತಂದಾಗ; ಅರಣ್ಯಾಧಿಕಾರಿಗಳು ಯಾವದೇ ಅಭಿವೃದ್ಧಿಗೂ ಅವಕಾಶವಾಗದಂತೆ ನಡೆದುಕೊಳ್ಳುವದು ತರವಲ್ಲವೆಂದು ಸಚಿವ ಸಿ.ಟಿ. ರವಿ ಮಾತಿನ ಚಾಟಿ ಬೀಸಿದರು.
ತಮ್ಮ ಇಲಾಖೆಯಿಂದ ಅನೇಕ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವಾಗ; ಬೇರೆ ಬೇರೆ ಇಲಾಖೆಗಳಿಂದ ಅಭಿವೃದ್ಧಿಗೆ ಅಡ್ಡಿಪಡಿಸುವದು ಅರಣ್ಯಾಧಿಕಾರಿಗಳಿಗೆ ಶೋಭೆ ನೀಡದೆಂದು ನೆನಪಿಸಿದರು. ಜನಪರ ಯೋಜನೆಗಳ ಜಾರಿಗೆ ಕೈಗೊಳ್ಳುವ ಒಳ್ಳೆಯ ಕೆಲಸಗಳಿಗೆ ಪರಸ್ಪರ ಹೊಂದಾಣಿಕೆಯಲ್ಲಿ ಸಹಕರಿಸ ಬೇಕೆಂದು ತಿಳಿ ಹೇಳಿದರು.