ಮಡಿಕೇರಿ, ಸೆ. 11: ಪ್ರತಿಯೊಬ್ಬರೂ ಕೂಡ ಅರಣ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಣತೊಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕರೆ ನೀಡಿದರು.ಅರಣ್ಯ ಇಲಾಖೆ ವತಿಯಿಂದ ಅರಣ್ಯ ಭವನ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಕೃತಿ ಎದುರು ಯಾರೂ ದೊಡ್ಡವರಲ್ಲ. ವೈಜ್ಞಾನಿಕತೆ ಎಷ್ಟೇ ಬೆಳೆದರೂ ಕೂಡ ಮಾನವನ ಬದುಕಿಗೆ ಅರಣ್ಯ ಸಂಪತ್ತು ಅತ್ಯವಶ್ಯಕವಾಗಿದ್ದು, ಅರಣ್ಯವನ್ನು ಉಳಿಸಿ ಬೆಳೆಸಿದರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದು ಸುನಿಲ್ ಅಭಿಪ್ರಾಯಿಸಿದರು.
ಮತ್ತೋರ್ವ ಅತಿಥಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಮಾತನಾಡಿ, ದೇಶದ ಗಡಿ ಕಾಯುವ ಸೈನಿಕರಂತೆಯೆ ಅರಣ್ಯ ಸಂಪತ್ತನ್ನು ಕಾವಲು ಕಾಯುವ ಅರಣ್ಯ ಸಿಬ್ಬಂದಿಯ ಪರಿಶ್ರಮ ಪ್ರಶಂಸನಾರ್ಹ. ಪ್ರಾಕೃತಿಕ ವಿಕೋಪದಂತಹ ದುರಂತಗಳನ್ನು ತಡೆಯಲು ಅರಣ್ಯ ರಕ್ಷಣೆ ಮಾಡುವದು ಅತ್ಯಗತ್ಯ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ ಮಾತನಾಡಿ, ಅರಣ್ಯ ಸಂರಕ್ಷಣೆ ವೃತ್ತಿಯಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಮೆಟ್ಟಿನಿಂತು ಕರ್ತವ್ಯವನ್ನು ನಿಷ್ಟೆಯಿಂದ
(ಮೊದಲ ಪುಟದಿಂದ) ಮಾಡುವಂತಾಗಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಗಣ್ಯರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ನಮನ ಸಲ್ಲಿಸಿದರು. ಹುತಾತ್ಮರಿಗೆ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು. ವಲಯ ಅರಣ್ಯಾಧಿಕಾರಿ ಶ್ರಮ ಕಾರ್ಯಕ್ರಮ ನಿರೂಪಿಸಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವರ್ಧನ್ ಸಿಂಗ್ ವಂದಿಸಿದರು.