ಮಡಿಕೇರಿ ಸೆ.11 : ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 10,137.98 ಲಕ್ಷ ರೂ.ಗಳ ವಹಿವಾಟು ನಡೆಸುವದರೊಂದಿಗೆ 24.97 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ. ಅಲ್ಲದೆ ಸದಸ್ಯರಿಗೆ ಶೇ.13ರ ಲಾಭಾಂಶ ನೀಡಲು ನಿರ್ಧರಿಸಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬ್ಯಾಂಕ್ ಪ್ರಸಕ್ತ 2407 ಮಂದಿ ಸದಸ್ಯರನ್ನು ಹೊಂದಿದ್ದು, ಅಧಿಕೃತ ಪಾಲು ಬಂಡವಾಳ 112.74 ಲಕ್ಷ ರೂ. ಹಾಗೂ ದುಡಿಯುವ ಬಂಡವಾಳ 3171.47 ಲಕ್ಷ ರೂ.ಗಳಷ್ಟಿದೆ. 3030.66 ಲಕ್ಷ ರೂ.ಗಳ ವಿವಿಧ ಠೇವಣಾತಿಗಳನ್ನು ಹೊಂದಿದ್ದು, ಕಳೆದ ಸಾಲಿಗೆ ಹೋಲಿಸಿದರೆ ದುಡಿಯುವ ಬಂಡವಾಳದಲ್ಲಿ 50.27 ಲಕ್ಷ ಹಾಗೂ ಠೇವಣಾತಿಗಳಲ್ಲಿ 166.15 ಲಕ್ಷದಷ್ಟು ಏರಿಕೆಯಾಗಿದೆ. ಅಲ್ಲದೆ 763.83 ಲಕ್ಷ ರೂ.ಗಳಷ್ಟು ಬೆಲೆಯ ಚಿನ್ನಾಭರಣಗಳನ್ನು ಈಡಿನ ಮೂಲಕ ಹೊಂದಿದೆ ಎಂದರು.
ಬ್ಯಾಂಕ್ ತಾನು ಹೊಂದಿರುವ ಠೇವಣಾತಿಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್‍ನಲ್ಲಿ ವಿಮೆ ಇಳಿಸಿದ್ದು, ತನ್ನ ದ್ರವ್ಯಾಸ್ತಿಯನ್ನು ನಿಗದಿತ ಮಿತಿಯೊಳಗೆ ಕಾಯ್ದುಕೊಂಡು ಬರುತ್ತಿದೆ. ಸುಮಾರು 548.56 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್‍ಗಳಲ್ಲಿ ವಿನಿಯೋಗಿಸಿದ್ದು, ಸರಕಾರಿ ಭದ್ರತಾ ಪತ್ರದಲ್ಲಿ 991.28 ಲಕ್ಷ ರೂ.ಗಳನ್ನು ವಿನಿಯೋಗಿಸಿದೆ. ಗ್ರಾಹಕರಿಗೆ 1745.68 ಲಕ್ಷ ರೂ.ಗಳ ವಿವಿಧ ಸಾಲಗಳನ್ನು ನೀಡಿದ್ದು, ಈ ಪೈಕಿ 687.41 ಲಕ್ಷ ರೂ.ಗಳನ್ನು ಆದ್ಯತಾ ವಲಯಕ್ಕೆ ನೀಡಲಾಗಿದೆ. ಒಟ್ಟು ಸಾಲ ನೀಡಿಕೆಯಲ್ಲಿ ಅನುತ್ಪಾದಕ ಆಸ್ತಿ(ಎನ್‍ಪಿಎ) ಪ್ರಮಾಣ 23.22ಲಕ್ಷ ರೂ. ಅಂದರೆ ಶೇ.1.33ರಷ್ಟು ಮಾತ್ರ ಇದ್ದು, ಸಾಲ ವಸೂಲಾತಿಯಲ್ಲಿ ಶೇ.92.22ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ತನ್ನ ಜಿ.ಟಿ.ರಸ್ತೆ ಶಾಖೆಯಲ್ಲಿ 2465.10 ಲಕ್ಷ ರೂ.ಗಳ ವ್ಯವಹಾರ ನಡೆಸಿದ್ದು, 620.98 ಲಕ್ಷ ರೂ.ಗಳ ಠೇವಣಿ ಹೊಂದಿದೆ ಮತ್ತು 368.68 ಲಕ್ಷ ರೂ.ಗಳ ವಿವಿಧ ಸಾಲವನ್ನು ನೀಡುವದರೊಂದಿಗೆ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದ ಅವರು, ಬ್ಯಾಂಕ್ ತನ್ನ ಗ್ರಾಹಕರಿಗೆ ಜಾಮೀನು ಸಾಲ, ಆಭರಣ ಸಾಲ, ಮನೆ ಖರೀದಿ ಸಾಲ, ವಾಹನ ಖರೀದಿ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಪಿಗ್ಮಿ 100 ದಿನದ ಸಾಲಗಳನ್ನು ನೀಡುತ್ತಿದ್ದು, ಬ್ಯಾಂಕ್‍ನಲ್ಲಿ ಠೇವಣಿ ಇಡುವ ಗ್ರಾಹಕರಿಗೆ ಕನಿಷ್ಟ 3.50ರಿಂದ ಗರಿಷ್ಠ ಶೇ.7.80ರವರೆಗೆ ಬಡ್ಡಿ ನೀಡಲಾಗುತ್ತಿದೆ ಅಲ್ಲದೆ ಒಂದು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟು ಠೇವಣಿ ಇಡುವ ಹಿರಿಯ ನಾಗರಿಕರ ಠೇವಣಿಗಳಿಗೆ ಶೇ.0.50ರಷ್ಟು ಹೆಚ್ಚಿನ ಬಡ್ಡಿ ನೀಡುತ್ತಿದೆ ಎಂದು ಬಾಲಕೃಷ್ಣ ಹೇಳಿದರು.
ಬ್ಯಾಂಕ್‍ನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವವರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಪ್ರೋತ್ಸಾಹ ಧನವನ್ನೂ ನೀಡುತ್ತಿದೆ. ಬ್ಯಾಂಕಿನಲ್ಲಿ ಮರಣೋತ್ತರ ಸಹಾಯ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಮಹಾಸಭೆ
ಬ್ಯಾಂಕ್‍ನ ಪ್ರಸಕ್ತ ಸಾಲಿನ ಮಹಾಸಭೆ ಸೆ.14ರಂದು ಮಡಿಕೇರಿಯ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿ ಯಲ್ಲಿ ಬ್ಯಾಂಕ್‍ನ ಉಪಾಧ್ಯಕ್ಷ ಬಿ.ಎಂ.ರಾಜೇಶ್, ನಿರ್ದೇಶಕ ಕೋಡಿ ಚಂದ್ರಶೇಖರ್, ಬಿ.ಕೆ.ಜಗದೀಶ್, ಜಿ.ಎಂ.ಸತೀಶ್ ಪೈ ಹಾಗೂ ಎಸ್.ಸಿ.ಸತೀಶ್ ಉಪಸ್ಥಿತರಿದ್ದರು.