ಸೋಮವಾರಪೇಟೆ, ಸೆ. 10: ಚಿರತೆ ಧಾಳಿಗೆ ತುತ್ತಾಗಿರುವ ನಾಯಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಮೀಪದ ಕಲ್ಕಂದೂರು ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಗ್ರಾಮದ ವೀರೇಶ್ ಎಂಬವರ ಮನೆಯ ಅಂಗಳದಲ್ಲಿ ಮಧ್ಯರಾತ್ರಿ ಪ್ರತ್ಯಕ್ಷವಾದ ಚಿರತೆ, ನಾಯಿಯ ಮೇಲೆ ಧಾಳಿ ನಡೆಸಿದೆ. ನಾಯಿ ತಪ್ಪಿಸಿಕೊಂಡು ಮನೆ ಬಾಗಿಲಿಗೆ ಬಂದಿದೆ. ಜೊತೆಯಿದ್ದ ಇನ್ನೆರಡು ನಾಯಿಗಳು ಬೊಗಳಿದಾಗ ಮನೆ ಮಾಲೀಕ ಹೊರ ಬಂದು ಟಾರ್ಚ್ ಹಾಕಿದ್ದಾರೆ. ಮನೆಯ ಮುಂಭಾಗದಲ್ಲಿದ್ದ ಚಿರತೆ ಓಡಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಪಶು ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವಿ.ಬದಾಮಿ ಅವರು ಗಾಯಗೊಂಡಿರುವ ನಾಯಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಚಿಕ್ಕತೋಳೂರು ಗ್ರಾಮದಲ್ಲಿ ಮೂರ್ನಾಲ್ಕು ನಾಯಿಗಳು ಕಾಣೆಯಾಗಿದ್ದವು. ನಂತರ ಒಂದು ನಾಯಿಯನ್ನು ತೀವ್ರವಾಗಿ ಗಾಯಗೊಳಿಸಿದ ನಂತರ ಚಿರತೆ ಇರುವದು ದೃಢಪಟ್ಟಿತ್ತು. ನಂತರ ಗೆಜ್ಜೆಹಣಕೋಡು ಗ್ರಾಮದಲ್ಲೂ ನಾಯಿಯನ್ನು ಚಿರತೆ ಹಿಡಿದಿತ್ತು. ಅಳುವಾರ ಗ್ರಾಮದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಡದಿಂದ ಅರಣ್ಯ ಇಲಾಖೆಯವರು ಪಕ್ಕದ ಅರಣ್ಯದಲ್ಲಿ ಪಂಜರ ಇಟ್ಟು ಹಿಡಿಯುವ ಪ್ರಯತ್ನ ಮಾಡಿದ್ದರು. ಅಲ್ಲಿಂದ ಕಾಲ್ಕಿತ್ತ ಚಿರತೆ ಚಿಕ್ಕತೋಳೂರು ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಈಗ ಕಲ್ಕಂದೂರು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.