ಮಡಿಕೇರಿ, ಸೆ. 11: ಕೊಡಗು ಜಿಲ್ಲೆಯಲ್ಲಿರುವ ಎಲ್ಲ 294 ಗ್ರಾಮಗಳಲ್ಲಿನ ದೇವಾಲಯಗಳು ಸೇರಿದಂತೆ, ಅಲ್ಲಿನ ಜನಸಂಖ್ಯೆ, ಪದ್ಧತಿ, ಪರಂಪರೆ ಸಹಿತ ಸಂಪೂರ್ಣ ಇತಿಹಾಸವನ್ನು ಸಂಗ್ರಹಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ‘ವೆಬ್‍ಸೈಟ್’ನಲ್ಲಿ ನಮೂದಿಸುವಂತೆ ಕರ್ನಾಟಕ ಪ್ರವಾಸೋದ್ಯಮ ಹಾಗೂ ಸಂಬಂಧಿಸಿದ ಇಲಾಖೆಯ ಸಚಿವ ಸಿ.ಟಿ. ರವಿ ಆದೇಶಿಸಿದ್ದಾರೆ.ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಇಂದು ಉಭಯ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳನ್ನು ಗ್ರಾಮಗಳ ಅಧ್ಯಯನಕ್ಕೆ ಬಳಸಿಕೊಂಡು ಮಕ್ಕಳ ಜ್ಞಾನದೊಂದಿಗೆ ವಿಕಾಸಹೊಂದುವ ದಿಸೆಯಲ್ಲಿ ಕಾರ್ಯನಿರ್ವಹಿಸಲು ಸಲಹೆ ನೀಡಿದರು.ಜಿಲ್ಲೆಯ 294 ಗ್ರಾಮಗಳಿಗೆ ಆಯಾ ಗ್ರಾ.ಪಂ. ವ್ಯಾಪ್ತಿಯ ನೋಡಲ್ ಅಧಿಕಾರಿಗಳನ್ನು ನಿಯೋಜಿಸುವ ಮುಖಾಂತರ ಪ್ರತಿ ಗ್ರಾಮಕ್ಕೆ 3 ರಿಂದ 5 ರಂತೆ ವಿದ್ಯಾರ್ಥಿಗಳ ತಂಡ ರಚಿಸಿ, ಈ ವಿನೂತನ ಕಾರ್ಯಕ್ಕೆ ಮುಂದಾಗು ವಂತೆ ತಿಳಿಸಿದರು. ಆ ದಿಸೆಯಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದ ಪ್ರತ್ಯೇಕ ಸಮಿತಿ ರಚಿಸಿಕೊಂಡು, ಗ್ರಾಮಗಳ ಅಧ್ಯಯನ ವರದಿಯನ್ನು ಪರಿಶೀಲಿಸಿ, ಯಾವದಾದರೂ ಅಂಶ ಬಿಟ್ಟು ಹೋಗಿದ್ದಲ್ಲಿ ಮರು ಸೇರ್ಪಡೆ ಗೊಳಿಸುವಂತೆಯೂ ತಿಳಿ ಹೇಳಿದರು. ಇಂತಹ ದಾಖಲೆಗಳು ಪ್ರತಿಯೊಂದು ಗ್ರಾಮದ ಐತಿಹಾಸಿಕ ಸಂಗತಿಗಳನ್ನು ಅಂತರ್ಜಾಲ ಮೂಲಕ ಎಲ್ಲರೂ ತಿಳಿದುಕೊಳ್ಳಲು ಸಹಕಾರಿ ಯಾಗಲಿದೆ ಎಂದು ಸಿ.ಟಿ. ರವಿ ನೆನಪಿಸಿದರು.ಪರಿಸರ ಸ್ನೇಹಿ ಯೋಜನೆಗೆ ಆದೇಶ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಾಗಿ ಗುರುತಿಸಿರುವ ಪ್ರಮುಖ 12 ಪ್ರವಾಸಿ ತಾಣಗಳೊಂದಿಗೆ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ ಇತರ 10 ತಾಣಗಳ ಸಹಿತ, ಪ್ರತಿ ಹಂತದ ಅಭಿವೃದ್ಧಿ ಸಂದರ್ಭ ಪರಿಸರ ಸ್ನೇಹಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಬೇಕೆಂದು ಆದೇಶಿಸಿದರು.
ಮಡಿಕೇರಿ ತಾಲೂಕಿನಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ, ತಲಕಾವೇರಿ, ಭಾಗಮಂಡಲ, ಪಾಡಿ ಇಗ್ಗುತ್ತಪ್ಪ ಸನ್ನಿಧಿ, ನಾಲ್ಕುನಾಡು ಅರಮನೆ, ರಾಜಾಸೀಟ್, ಅಬ್ಬಿ ಜಲಪಾತ ಮುಂತಾದೆಡೆ ವಿವಿಧ ಕಾಮಗಾರಿ ಸಂಬಂಧ ಗಮನ ಸೆಳೆದ ಸಚಿವರು ಆಯ ಯೋಜನೆಗಳ ಗುಣಮಟ್ಟ ಕಾಯ್ದುಕೊಳ್ಳುವಂತೆ ತಿಳಿ ಹೇಳಿದರು.
ಅಂತೆಯೇ ಕುಶಾಲನಗರ ನಿಸರ್ಗಧಾಮ, ಹಾರಂಗಿ ಜಲಾಶಯ ಸಹಿತ ಸೋಮವಾರಪೇಟೆ ತಾಲೂಕಿನ ಇತರ ತಾಣಗಳಾದ ಮಲ್ಲಳ್ಳಿ ಜಲಪಾತ, ಕುಶಾಲನಗರ ತಾವರೆಕೆರೆ, ದುಬಾರೆ ಮುಂತಾದೆಡೆ ಕೈಗೊಂಡಿರುವ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.
ಇನ್ನು ವೀರಾಜಪೇಟೆ ತಾಲೂಕಿನ ಇರ್ಪು ಜಲಪಾತ, ನಾಗರಹೊಳೆ, ಕುಂದಬೆಟ್ಟ ಇತ್ಯಾದಿ ಪರಿಸರ ಸ್ನೇಹಿ ಯೋಜನೆಯಡಿ ಅಭಿವೃದ್ಧಿಗೆ ನಿರ್ದೇಶಿಸಿದ ಸಚಿವರು, ಅರಣ್ಯ ಇಲಾಖೆಯ ಪ್ರವಾಸೋದ್ಯಮ ಅಭಿವೃದ್ಧಿಗೆ
(ಮೊದಲ ಪುಟದಿಂದ) ತೊಡಕು ಉಂಟು ಮಾಡದೆ, ಪರಸ್ಪರ ಸಮಾಲೋಚಿಸಿ ಕೆಲಸ ಕೈಗೊಳ್ಳಬೇಕೆಂದರು.
ಸ್ಥಳೀಯರಿಗೆ ತೊಡಗಿಸಿ
ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರತಿಷ್ಠಿತ ಕಂಪೆನಿ ತೋಟಗಳು ಹಾಗೂ ಸಂಘಸಂಸ್ಥೆಗಳು, ಸ್ತ್ರೀಶಕ್ತಿ ಗುಂಪುಗಳನ್ನು ತೊಡಗಿಸಿಕೊಂಡು, ಮೂಲಭೂತ ಸೌಕರ್ಯಗಳೊಂದಿಗೆ, ಗ್ರಾಮ ಅರಣ್ಯ ಸಮಿತಿ ರಚಿಸಿ, ಆ ಮುಖಾಂತರ ಪರಿಸರ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಚಿವ ರವಿ ನೆನಪಿಸಿದರು. ಅಲ್ಲದೆ ಪ್ರತಿಷ್ಠಿತ ಉದ್ದಿಮೆಗಳು ಒಂದೊಂದು ತಾಣಗಳನ್ನು ದತ್ತು ಪಡೆದು ಗ್ರಾಮ ಸಮಿತಿ ವ್ಯವಸ್ಥೆಯಡಿ ನಿರ್ವಹಿಸಲು ನೀತಿ, ನಿಯಮ ರೂಪಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಕನಿಷ್ಟ ಸೌಲಭ್ಯಕ್ಕೆ ಒತ್ತು
ಪ್ರವಾಸಿ ತಾಣಗಳಲ್ಲಿ ಪ್ರವಾಸಿಗಳಿಗೆ ಅನುಕೂಲವಾಗುವಂತೆ ಶೌಚಾಲಯ, ನೀರಿನ ವ್ಯವಸ್ಥೆ, ಮಾರ್ಗದರ್ಶಿಗಳ ನಿಯೋಜನೆ ಸಹಿತ ಕನಿಷ್ಟ ಸೌಲಭ್ಯಗಳಿಗೆ ಆದ್ಯತೆ ನೀಡುವಂತಾಗಬೇಕೆಂದು ಸಚಿವ ಸಿ.ಟಿ. ರವಿ ಸಲಹೆ ನೀಡಿದರು.
ಕಾಮಗಾರಿ ಪೂರೈಸಿ
ಮಡಿಕೇರಿಯ ಕೊಡವ ಹೆರಿಟೇಜ್, ಸುವರ್ಣ ಸಮುಚ್ಚಯ ಭವನ, ಕುಶಾಲನಗರ ಕಲಾಭವನ, ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ವಸ್ತು ಸಂಗ್ರಹಾಲಯ ಮುಂತಾದ ಅಪೂರ್ಣ ಕಾಮಗಾರಿಗಳನ್ನು ಪರಿಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಬೇಕೆಂದು ಸಿ.ಟಿ. ರವಿ ಬೊಟ್ಟು ಮಾಡಿದರು. ಸರಕಾರದ ಅನುದಾನಗಳನ್ನು ಸದ್ಬಳಕೆ ಮಾಡುವಂತೆಯೂ ಮಾತಿನ ಚಾಟಿ ಬೀಸಿದರು.
‘ಶಕ್ತಿ’ ವರದಿ ಪ್ರಸ್ತಾಪ
ಸಭೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಇಂದಿನ ‘ಶಕ್ತಿ’ಯಲ್ಲಿ ಫೀ.ಮಾ. ಕಾರ್ಯಪ್ಪ ಜನ್ಮದಿನೋತ್ಸವ ಆಚರಣೆಯ ಹಣ ಬಿಡುಗಡೆಗೊಳ್ಳದಿರುವ ವರದಿ ಕುರಿತು ಪ್ರಸ್ತಾಪಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿ. ರೂ. 10 ಲಕ್ಷ ಅನುದಾನದ ಘೋಷಣೆಯಾಗಿದ್ದು, ರೂ. 4 ಲಕ್ಷ ಮೊತ್ತದ ಕಾರ್ಯಕ್ರಮ ಆಯೋಜಿಸಿದ್ದಾಗಿ ಸಚಿವರ ಗಮನ ಸೆಳೆದರಲ್ಲದೆ, ಇದುವರೆಗೆ ಹಣ ಬಿಡುಗಡೆಗೊಂಡಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಚಿವರು ಹಾಗೂ ಶಾಸಕರೊಂದಿಗೆ ಪ್ರಬಾರ ಜಿಲ್ಲಾಧಿಕಾರಿಯಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ. ಸ್ನೇಹಾ, ಉಪವಿಭಾಗಾಧಿಕಾರಿ ಟಿ. ಜವರೇಗೌಡ ಸೇರಿದಂತೆ ಲೋಕೋಪಯೋಗಿ, ಅರಣ್ಯ ಇಲಾಖೆ ಮತ್ತಿತರ ಅಧಿಕಾರಿಗಳು ಹಾಜರಿದ್ದು, ಸಚಿವರಿಗೆ ಮಾಹಿತಿ ಒದಗಿಸಿದರು.