ಮಡಿಕೇರಿ, ಸೆ. 10: ಮಡಿಕೇರಿ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣ ವೃತ್ತಿ ಯಲ್ಲಿ 35 ವರ್ಷಗಳ ಸೇವಾನುಭವ ಹೊಂದಿರುವ ಜಿಲ್ಲೆಯ ಹಿರಿಯ ಉಪನ್ಯಾಸಕ ಚೌರೀರ ಡಿ. ಜಗತ್ ತಿಮ್ಮಯ್ಯ ಮತ್ತು ಡಾ. ಟಿ.ಡಿ. ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ಮಡಿಕೇರಿ ಲಯನ್ಲ್ ಸಭಾಂಗಣದಲ್ಲಿ ಆಯೋಜಿತ ಶಿಕ್ಷಕರ ದಿನಾಚರಣೆ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ, ಶಿಕ್ಷಕ ವೃತ್ತಿಯಲ್ಲಿ ತೊಡಗುವ ಮುನ್ನ ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ಒಲವು ಮುಖ್ಯವಾಗಬೇಕು. ಆಯ್ಕೆ ಮಾಡಿಕೊಂಡ ಪಠ್ಯ ವಿಷಯದ ಬಗ್ಗೆಯೂ ಪ್ರೀತಿ ಹೊಂದಿರಬೇಕು. ಕುಟುಂಬದ ಮಕ್ಕಳನ್ನು ಪ್ರೀತಿಸುವಷ್ಟೇ ಕಾಳಜಿಯನ್ನು ವಿದ್ಯಾರ್ಥಿಗಳ ಮೇಲೂ ತೋರುವಂತಾಗಬೇಕು. ಹೀಗಿದ್ದಾಗ ಮಾತ್ರ ಶಿಕ್ಷಕ ತನ್ನ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಸನ್ಮಾನಿತರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಿ. ಚೌರೀರ ಜಗತ್ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿ ಗಳನ್ನು ಹದ್ದುಬಸ್ತಿನಲ್ಲಿರಿಸಬೇಕಾದ ಹೊಣೆಗಾರಿಕೆಯೊಂದಿಗೆ ಸಾಮಾಜಿಕ ಜವಬ್ದಾರಿಯೂ ಶಿಕ್ಷಕರ ಮೇಲಿದೆ ಎಂದರು. ಪ್ರಕೃತ್ತಿ ವಿಕೋಪ ಸಂದರ್ಭ ಲಯನ್ಸ್ ಸದಸ್ಯರ ಸಾಮಾಜಿಕ ಚಟುವಟಿಕೆಗಳನ್ನು ಶ್ಲಾಘಿಸಿದರು.

ಲಯನ್ಸ್ ವಲಯಾಧ್ಯಕ್ಷ ಕೆ.ಕೆ. ದಾಮೋದರ್ ಮಾತನಾಡಿ, ಅಜ್ಞಾನದ ಕತ್ತಲನ್ನು ಹೊಡೆದೋಡಿಸಿ ಜ್ಞಾನದ ಬೆಳಕಿನೆಡೆಗೆ ಸಾಗುವಂತೆ ಮಾಡುವ ಶಿಕ್ಷಕರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ. ಶಿಕ್ಷಕರ ಕೊಡುಗೆ ಊಹೆಗೂ ನಿಲುಕದ್ದು ಎಂದು ಪ್ರಶಂಶಿಸಿದರು. ಮಡಿಕೇರಿ ಲಯನ್ಸ್ ಹಿರಿಯ ನಿರ್ದೇಶಕ ಹಾಗೂ ವಕೀಲ ಎಂ.ಎ. ನಿರಂಜನ್ ಪ್ರಕೃತ್ತಿ ವಿಕೋಪ ದಲ್ಲಿ ಸಂಕಷ್ಟಕ್ಕೀಡಾದ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿಯೋರ್ವಳ ಸಹಾಯ ಕ್ಕಾಗಿ ಆರ್ಥಿಕ ನೆರವನ್ನು ಈ ಸಂದರ್ಭ ಕಾಲೇಜಿನ ಪ್ರಾಂಶು ಪಾಲರಿಗೆ ಹಸ್ತಾಂತರಿಸಿದರು.

ಮಡಿಕೇರಿ ಲಯನ್ಸ್ ಅಧ್ಯಕ್ಷ ಎಲ್. ಮೋಹನ್ ಕುಮಾರ್, ಕಾರ್ಯದರ್ಶಿ ಕೆ. ಮಧುಕರ್, ಖಜಾಂಚಿ ಡಿ. ಮಧುಕರ್ ಶೇಠ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪಿ.ಪಿ. ಸೋಮಣ್ಣ, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಬಿ.ಸಿ. ನಂಜಪ್ಪ, ಲಯನ್ ವಲಯದ ವಿವಿಧ ಕ್ಲಬ್‍ಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.