ಶನಿವಾರಸಂತೆ, ಸೆ. 9: ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕೊಡಗು ಜಿಲ್ಲಾ ಸಶಸ್ತ್ರಮೀಸಲು ಪಡೆಯ ಎ.ಆರ್. ಎಸ್.ಐ. ಬಿ.ಸಿ. ಚೆನ್ನಕೇಶವ (48) ಅವರ ಅಂತ್ಯಕ್ರಿಯೆ ಹುಟ್ಟೂರು ಶನಿವಾರಸಂತೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ಸಕಲ ಪೊಲೀಸ್ ಗೌರವದೊಂದಿಗೆ ಶನಿವಾರ ರಾತ್ರಿ ನೆರವೇರಿತು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಡಿವೈಎಸ್ಪಿ ಮುರಳೀಧರ್, ಸಿಪಿಐ ನಂಜುಂಡೇಗೌಡ, ಪಿಎಸ್‍ಐ ಮರಿಸ್ವಾಮಿ, ಇತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. ಡಿ.ಆರ್.ಪೊಲೀಸ್ ವತಿಯಿಂದ 3 ಸುತ್ತು ಗುಂಡು ಹಾರಿಸಿ ಮೃತರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಎ. ಆದಿಲ್ ಪಾಶ, ಮುಖಂಡರಾದ ಎಸ್.ಜೆ. ರಾಜಪ್ಪ, ಶಿವಶಂಕರ್, ಪಾಪಣ್ಣ, ಅಮೀರ್ ಸಾಬ್, ಚೆನ್ನಬಸಪ್ಪ, ಲಯನ್ಸ್ ಸಂಸ್ಥೆ ಸದಸ್ಯೆ ನರೇಶ್ಚಂದ್ರ ಇತರರು ಪಾಲ್ಗೊಂಡಿದ್ದರು.