ವೀರಾಜಪೇಟೆ, ಸೆ.9: ವೀರಾಜಪೇಟೆ ಪಟ್ಟಣದಲ್ಲಿ ತಾ:1ರಂದು ಗೌರಿ ಹಾಗೂ 2ರಂದು ಗಣೇಶನನ್ನು ಪ್ರತಿಷ್ಠಾಪಿಸಲಾಗಿದ್ದು ಹನ್ನೊಂದು ದಿನಗಳ ತನಕ ಅಪರಾಹ್ನ ಹಾಗೂ ರಾತ್ರಿ ಪೂಜೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ತಾ. 12ರಂದು ರಾತ್ರಿ 9 ಗಂಟೆಗೆ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವಕ್ಕೆ ಉತ್ಸವ ಸಮಿತಿಗಳು ಪೂರ್ವ ಸಿದ್ಧತೆ ನಡೆಸಿವೆ.
ವೀರಾಜಪೇಟೆ ಪಟ್ಟಣದ ಇಪ್ಪತ್ತೊಂದು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ವಿವಿಧ ಉತ್ಸವ ಸಮಿತಿಗಳು ವಿಸರ್ಜನೋತ್ಸವದ ಸಾಮೂಹಿಕ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಮೆರವಣಿಗೆಯಲ್ಲಿ ವಿವಿಧ ಮನರಂಜನೆಯ ತಂಡಗಳು, ಕೇರಳದ ಚಂಡೆಮದ್ದಳೆ, ಪೂಕೋಡ್ ಬ್ಯಾಂಡ್ ಇನ್ನಿತರ ವಿವಿಧ ವಾದ್ಯಗೋಷ್ಠಿಗಳು ಮಂಗಳೂರು, ಮೈಸೂರು, ಮಡಿಕೇರಿ, ಕೇರಳದಿಂದಲೂ ವಿದ್ಯುತ್ ಅಲಂಕೃತ ಮಂಟಪಗಳು ಭಾಗವಹಿಸಲಿವೆ.
ವೀರಾಜಪೇಟೆ ಬಳಿಯ ತೋರ ಗ್ರಾಮ, ಇಲ್ಲಿನ ಮಲೆತಿರಿಕೆಬೆಟ್ಟ, ನೆಹರೂನಗರ ಹಾಗೂ ಅರಸುನಗರದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಮನೆಗಳು ಜಖಂಗೊಂಡಿರುವದರಿಂದ; ಮಳೆಯಿಂದ ಆಸ್ತಿ ಪಾಸ್ತಿ ಕಳೆದುಕೊಂಡು ನಿವಾಸಿಗಳು ಸಂಕಷ್ಟದಲ್ಲಿರುವದನ್ನು ಗಮನಿಸಿ ವಿವಿಧ ಉತ್ಸವ ಸಮಿತಿಗಳು ಈ ಬಾರಿಯ ಗೌರಿಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸುವಂತೆ ಈ ಹಿಂದೆಯೇ ತೀರ್ಮಾನಿಸಿದ್ದವು.
ವೀರಾಜಪೇಟೆ ವಿಭಾಗದಲ್ಲಿ ಈಗಲೂ ಮಳೆ ಮುಂದುವರೆದಿದ್ದು ಮಳೆಯ ನಡುವೆಯೇ ಎಲ್ಲ ಉತ್ಸವ ಸಮಿತಿಗಳು ದಿನಕ್ಕೆ ಎರಡು ಬಾರಿಯಂತೆ ಪೂಜೆ ಹಮ್ಮಿಕೊಂಡಿದ್ದರೂ ಭಕ್ತಾದಿಗಳು ಸಂಖ್ಯೆ ವಿರಳವಾಗಿದೆ. ವಿಸರ್ಜನೋತ್ಸವದ ಅಂಗವಾಗಿ ಯಾವದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್‍ನ್ನು ಏರ್ಪಡಿಸಲಾಗಿದ್ದು; ಜಿಲ್ಲೆಯ ಸಶಸ್ತ್ರ ಮೀಸಲು ತುಕಡಿಗಳು, ಹೋಮ್‍ಗಾರ್ಡ್‍ಗಳು, ಮಹಿಳಾ ಪೊಲೀಸರು, ಸ್ಥಳೀಯ ಪೊಲೀಸರು, ಹೊರಗಿನಿಂದ ಬಂದ ಪೊಲೀಸರು ಸೇರಿದಂತೆ 400ಕ್ಕೂ ಅಧಿಕ ಮಂದಿ ಬಂದೋಬಸ್ತ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಸ್ಥಾನದ ಗಣಪತಿ ಸೇವಾ ಟ್ರಸ್ಟ್, ಜೈನರಬೀದಿಯ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ತೆಲುಗರಬೀದಿಯ ಅಂಗಾಳಪರಮೇಶ್ವರಿ ದೇವಸ್ಥಾನದ ವಿನಾಯಕ ಯುವಕ ಭಕ್ತ ಮಂಡಳಿ, ದಖ್ಖನಿಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ನೆಹರೂನಗರದ ನೇತಾಜಿ ಉತ್ಸವ ಸಮಿತಿ, ಪಂಜರಪೇಟೆ ಗಣಪತಿಬೀದಿಯ ಮಹಾಗಣಪತಿ ಸೇವಾ ¸ಂಘ, ಪಂಜರ್‍ಪೇಟೆಯ ವಿನಾಯಕ ಸೇವಾ ಸಮಿತಿ, ಇಲ್ಲಿನ ಚಿಕ್ಕಪೇಟೆಯ ಆಂಜನೇಯ ದೇವಸ್ಥಾನದ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಕುಕ್ಲೂರಿನ ವಿಘ್ನೇಶ್ವರ ಉತ್ಸವ ಸಮಿತಿ, ಸುಂಕದ ಕಟ್ಟೆಯ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆಬೆಟ್ಟದ ಕಣ್ಮಣಿ ವಿನಾಯಕ ಉತ್ಸವ ಸೇವಾ ಸಮಿತಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ ಸುಣ್ಣದ ಬೀದಿ ಹರಿಕೇರಿಯ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಕೆ.ಬೋಯಿಕೇರಿಯ ವಿಘ್ನೇಶ್ವರ ಗಣಪತಿ ಸೇವಾ ಸಮಿತಿ, ಇಲ್ಲಿನ ಮೀನುಪೇಟೆಯ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಗೌರಿಕೆರೆಯ ಗಣಪತಿ ಸೇವಾ ಸಮಿತಿ, ಅಯ್ಯಪ್ಪಬೆಟ್ಟದ ವರದ ವಿನಾಯಕ ಸೇವಾ ಸಮಿತಿ, ಅಪ್ಪಯ್ಯಸ್ವಾಮಿ ರಸ್ತೆಯ ಬಾ¯ಂಜನೇಯ ವಿನಾಯಕ ಉತ್ಸವ ಸಮಿತಿ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪೌರ ನೌಕರರ ಸೇವಾ ಸಂಘದ ಗಣಪತಿ ಸೇವಾ ಸಮಿತಿ ಸೇರಿದಂತೆ 21 ಉತ್ಸವ ಸಮಿತಿಗಳು ಹನ್ನೊಂದು ದಿನಗಳ ಉತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲಿವೆ.
ಡಿ.ಎಂ.ಆರ್.