ಮಡಿಕೇರಿ, ಸೆ. 9: ಕೊಡಗಿನ ಕುಲದೇವತೆ ತಲಕಾವೇರಿ ಸನ್ನಿಧಿಯಲ್ಲಿ ಮಹಾ ಅಪಚಾರವಾಗಿ ಹೋಗಿದೆಯಾ? ಇಂತಹ ಒಂದು ಆತಂಕಭರಿತ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಕಾರಣ ಇತಿಹಾಸದಲ್ಲಿ ಹಿಂದೆಂದೂ ಘಟಿಸದೇ ಇರುವಂತಹ ಅವಘಡಗಳು ಸಾಲು ಸಾಲಾಗಿ ತಲಕಾವೇರಿ ವ್ಯಾಪ್ತಿಯಲ್ಲಿ ನಡೆಯುತ್ತಿರುವದು.
ಆಗಸ್ಟ್ ತಿಂಗಳ ಮಹಾಮಳೆಯ ಸಂದರ್ಭ ತಲಕಾವೇರಿ ಸನ್ನಿಧಾನದ ವಾಹನ ಪಾರ್ಕಿಂಗ್ ಬಳಿ ಮುಖ್ಯ ರಸ್ತೆ ಮೇಲೆ ಬ್ರಹ್ಮಗಿರಿ (ಗಜರಾಜಗಿರಿ) ಬೆಟ್ಟದ ಭಾಗವೊಂದು ಕುಸಿದು ಹಲವು ದಿನಗಳ ಕಾಲ ಸಂಚಾರ ಸ್ಥಗಿತವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಕುಸಿತವಾಗಿದ್ದ ಬೆಟ್ಟದ ಮೇಲ್ಭಾಗದಲ್ಲೇ ಹತ್ತಾರು ಮೀಟರ್ ಉದ್ದದವೆರೆಗೆ ಬೆಟ್ಟ ಬಿರುಕು ಬಿಟ್ಟು ಆತಂಕ ಸೃಷ್ಟಿಯಾಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಅದೇ ಬೆಟ್ಟ ಮತ್ತೆ ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟು ನಿಂತಿದೆ.
ತಲಕಾವೇರಿ ಸನ್ನಿಧಿಯು ಬ್ರಹ್ಮಗಿರಿ, ಗಜರಾಜಗಿರಿ, ವಾಯುಗಿರಿ, ಅಗ್ನಿಗಿರಿ ಎಂಬ ನಾಲ್ಕು ಪರ್ವತ ಶ್ರೇಣಿಗಳಿದ್ದು ಇವುಗಳ ಮಧ್ಯೆ ಕಾವೇರಿ ಕುಂಡಿಕೆಯಿದೆ. ಇದೀಗ ಬಿರುಕು ಬಿಟ್ಟಿರುವ ಗಜರಾಜಗಿರಿ ಬೆಟ್ಟ, ಬ್ರಹ್ಮಗಿರಿ ಬೆಟ್ಟಕ್ಕೆ ಒತ್ತಿಕೊಂಡಿದ್ದು ಅಂಗಡಿ ಮಳಿಗೆಗಳಿರುವ ರಸ್ತೆಯ ಬಲಬದಿಯ ಮೇಲ್ಭಾಗದಲ್ಲಿದೆ. ಈ ಬೆಟ್ಟದಲ್ಲಿ ಏನಾಗುತ್ತಿದೆ ಎಂಬದನ್ನು ಕಂಡುಕೊಳ್ಳಲು ಅದನ್ನು ಏರಿ ನೋಡಿದಾಗ ಅಲ್ಲಿ ಕಂಡಿದ್ದು ಹಲವು ಪ್ರಮಾದಗಳು. 2013ರಲ್ಲಿ ಅಂದು ಮಂತ್ರಿಯಾಗಿದ್ದ, ಸಿ.ಹೆಚ್. ವಿಜಯ್ ಶಂಕರ್ ಅವರ ನೇತೃತ್ವದಲ್ಲಿ ಗಜರಾಜಗಿರಿ ಬೆಟ್ಟಕ್ಕೆ ಜೆಸಿಬಿ ಹತ್ತಿಸಿ ಇಂಗು ಗುಂಡಿಗಳನ್ನು ನಿರ್ಮಿಸಲಾಗಿತ್ತು. ಚಾಮುಂಡಿ ಬೆಟ್ಟದಲ್ಲಿ ನಿರ್ಮಿಸಲಾಗಿದ್ದ ಇಂಗು ಗುಂಡಿ ಮಾದರಿಯಲ್ಲೇ ಬ್ರಹ್ಮಗಿರಿ ವ್ಯಾಪ್ತಿಯಲ್ಲೂ ಗುಂಡಿ ತೋಡಲಾಗಿತ್ತು. ಆದರೆ ಇವುಗಳು ಇಂಗುಗುಂಡಿ ಗಳಂತಿರದೆ ಬೃಹತ್ ಕಂದಕಗಳಂತೆ ಗೋಚರವಾಗುತ್ತಿವೆ. ಸುಮಾರು ಎಂಟು ಅಡಿ ಆಳ, ಮೂರರಿಂದ ಐದು ಅಡಿ ಅಗಲ ಮತ್ತು ಸುಮಾರು 10 ಅಡಿಗಳಷ್ಟು ಉದ್ದವಿದ್ದು ನೀರಿನಿಂದ ತುಂಬಿ ನಿಂತಿವೆ. ಜೆಸಿಬಿ ತೆರಳುವ ದಾರಿಗಾಗಿಯೂ ಬೆಟ್ಟವನ್ನು ಅಗೆದು ವಿರೂಪಗೊಳಿಸಲಾಗಿದೆ. ಮೊದಲ ಬಾರಿ ಬೆಟ್ಟ ಬಿರುಕು ಬಿಟ್ಟಿದ್ದು ಇದೇ ಜೆಸಿಬಿ ತೆರಳಿದ ಹಾದಿಯಲ್ಲಿ. ಎರಡನೇ ಬಾರಿ ಬಿರುಕು ಬಿಟ್ಟಿರುವದು ಇಂಗು ಗುಂಡಿಗಳಿರುವ ಜಾಗದಲ್ಲಿ.
ಆದರೆ ಕೆಲ ದಿನಗಳ ಹಿಂದೆ ಈ ಗಜರಾಜಗಿರಿ ಬೆಟ್ಟದ ಒಂದು ಭಾಗ ಕುಸಿದಿದ್ದು ಇದರಿಂದ ಬೆಟ್ಟದ ಕೆಳಗಿನ ಭಾಗದಲ್ಲಿ ಅಡಿಪಾಯ ದುರ್ಬಲವಾಗಿ ಬೆಟ್ಟ ಬಿರುಕು ಬಿಟ್ಟಿದೆ ಎಂಬದು ಅರಣ್ಯ ಇಲಾಖೆ ವಾದ. ಆದರೆ ಗಮನಿಸಬೇಕಾದ ಅಂಶವೇನೆಂದರೆ ಇಲ್ಲಿ ಬೆಟ್ಟ ಕುಸಿಯಲು ಕಾರಣವಾಗಿದ್ದೇ ಈ ಇಂಗು ಗುಂಡಿಗಳು. ಈ ಬೃಹತ್ ಗುಂಡಿಗಳಲ್ಲಿ ಯಥೇಚ್ಛ ನೀರು ನಿಂತು ಅದು ಹೊರಹೋಗಲು ಮಾರ್ಗವಿಲ್ಲದೆ, ಬೆಟ್ಟದ ಮಣ್ಣು ಸಂಪೂರ್ಣ ಕೆಸರಿನಂತಾಗಿ ಒಮ್ಮೆಲೇ ಗುಡ್ಡ ಕುಸಿತವಾಗಿದೆ. ಇಲ್ಲವಾದರೆ ವಾರ್ಷಿಕ 400 ಇಂಚಿಗೂ ಅಧಿಕ ಮಳೆ ಗಾಳಿಯಾಗುವ ಈ ಸ್ಥಳದಲ್ಲಿ ಬೆಟ್ಟಗಳು ಅಷ್ಟು ಸುಲಭದಲ್ಲಿ ಅಲ್ಲಾಡುವದಿಲ್ಲ.
ಸಂಶಯ ಪುಷ್ಟೀಕರಿಸಿದ ವರದಿ
ಕೆದಮುಳ್ಳೂರು ಗ್ರಾಮದ ತೋರಾ, ವೀರಾಜಪೇಟೆಯ ಅಯ್ಯಪ್ಪ ಬೆಟ್ಟ ಮತ್ತು ತಲಕಾವೇರಿಯ (ಬ್ರಹ್ಮಗಿರಿ) ಗಜರಾಜಗಿರಿ ಬೆಟ್ಟದಲ್ಲಿ ಭೂಕುಸಿತ ಮತ್ತು ಬೆಟ್ಟ ಬಿರುಕು ಬಿಟ್ಟ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜùರು ಇದೀಗ ಜಿಲ್ಲಾಡಳಿತಕ್ಕೆ ವರದಿ ಸಲಿಸಿದ್ದಾರೆ. ಇವರ ಪ್ರಕಾರ ಬ್ರಹ್ಮಗಿರಿ ಬೆಟ್ಟದಲ್ಲಿ ಭೂ ಕುಸಿತ ಮತ್ತು ಬೆಟ್ಟ ಬಿರುಕು ಬಿಡಲು ರಸ್ತೆಗಾಗಿ ಬೆಟ್ಟವನ್ನು ಅಗೆದಿರುವದು ಮತ್ತು ಬೆಟ್ಟದಲ್ಲಿ ಬೃಹತ್ ಚರಂಡಿಗಳನ್ನು ತೆಗೆದಿರುವದೇ ಪ್ರಮುಖ ಕಾರಣ ಎಂದು ಉಲ್ಲೇಖಿಸಿದ್ದಾರೆ.
2013ರಲ್ಲಿ ನಡೆದುಹೋದ ಒಂದು ಪ್ರಮಾದದಿಂದಾಗಿ ಇಂದು ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರವೇ ಅಪಾಯದಲ್ಲಿದೆ. ಅಂದು ಯಾರದ್ದೋ ಒತ್ತಡದಿಂದಾಗಿ ಅತಿಸೂಕ್ಷ್ಮ ಬ್ರಹ್ಮಗಿರಿ ವಲಯದಲ್ಲಿ ಇಂಗು ಗುಂಡಿ ತೋಡಲು ನಿರ್ಧರಿಸಲಾಯಿತು. ಆದರೆ ಆ ಸೇವೆಯಲ್ಲಿದ್ದ ಅರಣ್ಯಾಧಿಕಾರಿಗಳಿಗೆ ನಮ್ಮ ಪ್ರಕೃತಿಯ ಸೂಕ್ಷ್ಮಗಳು ಅರ್ಥವಾಗಲಿಲ್ಲವೇಕೆ? ಬ್ರಹ್ಮಗಿರಿ ಪರ್ವತಶ್ರೇಣಿ ಅತಿಸೂಕ್ಷ್ಮ ಜೀವವೈವಿಧ್ಯಗಳ ತಾಣವಾಗಿದ್ದು ಇಲ್ಲಿ ಜೆಸಿಬಿ ಬಳಸಿ ಕಾಮಗಾರಿ ನಡೆಸುವದು ಅಕ್ಷಮ್ಯ. ಅಂದು ತಲಕಾವೇರಿಯಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಬೆಟ್ಟಗಳ ಮೇಲೆ ಇಂಗು ಗುಂಡಿಗಳನ್ನು ತೋಡಲಾಯಿತು ಎಂದು ಹಲವರು ಸಮರ್ಥಿಸಿಕೊಳ್ಳುತ್ತಾರೆ.
ಆದರೆ ಅಂತರ್ಜಲ ಹೆಚ್ಚಿಸುವ ಭರದಲ್ಲಿ ಸಂಭವಿಸಬಹುದಾದ ಪ್ರಮಾದಗಳ ಬಗ್ಗೆ ಯಾರೂ ಚಿಂತಿಸಲಿಲ್ಲ.! ಬ್ರಹ್ಮಗಿರಿಯಂತಹ ಬೆಟ್ಟಸಾಲಿನಲ್ಲಿ ಇಂಗುಗುಂಡಿಗಳು ಸಂಪೂರ್ಣ ಅವೈಜ್ಞಾನಿಕ ಎಂದು ಪರಿಸರವಾದಿಗಳು ಕೂಡ ವಾದಿಸುತ್ತಾರೆ. ಬಿರುಕುಬಿಟ್ಟು ನಿಂತಿರುವ ಬೆಟ್ಟ ಇದೀಗ ಅಪಾಯವನ್ನು ಆಹ್ವಾನಿಸುತ್ತಿದ್ದು, ಬೆಟ್ಟದ ತಪ್ಪಲಿನ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳು ಮುಚ್ಚಲ್ಪಟ್ಟಿವೆ. ತಲಕಾವೇರಿಯ ಪ್ರಧಾನ ಅರ್ಚಕ ನಾರಾಣಾಚಾರ್ ಸೇರಿದಂತೆ ನಾಲ್ಕು ಅರ್ಚಕರ ಕುಟುಂಬಂಗಳಿಗೆ ಮನೆಗಳನ್ನು ತೆರವುಗೊಳಿಸವಂತೆ ತಹಶೀಲ್ದಾರ್ ಮೌಖಿಕ ಆದೇಶ ನೀಡಿದ್ದಾರೆ.
-ಐಮಂಡ ಗೋಪಾಲ್ ಸೋಮಯ್ಯ