ಚೆಟ್ಟಳ್ಳಿ, ಸೆ. 7: ಪ್ರವಾಹದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತ ರಾಗಿರುವ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಸಂತ್ರಸ್ತರಿಗೆ ಆಯಾ ಗ್ರಾ.ಪಂ ವ್ಯಾಪ್ತಿಯ ಪೈಸಾರಿ ಜಾಗಗಳಲ್ಲೇ ಮನೆ ನಿರ್ಮಿಸಿ ಕೊಡಬೇಕೆಂದು ಸಿಪಿಐ (ಎಂ) ಪಕ್ಷದ ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪ ಒತ್ತಾಯಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ಪೈಸಾರಿ ಜಾಗಗಳನ್ನು ಬಲಾಢ್ಯರು ಅತಿಕ್ರಮಿಸಿಕೊಂಡಿದ್ದಾರೆ. ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿಯಲ್ಲಿ ಸಮಗ್ರ ಸರ್ವೆ ನಡೆಸಬೇಕು. ರಾಜಕೀಯ ಪಕ್ಷಗಳ ಮುಖಂಡರುಗಳು ತಮ್ಮ ಪ್ರಭಾವ ಉಪಯೋಗಿಸಿಕೊಂಡು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ.

ಅವರಿಂದ ಜಾಗಗಳನ್ನು ವಶಪಡಿಸಿಕೊಂಡು ಸಂತ್ರಸ್ತರಿಗೆ ಹಂಚಬೇಕು. ಇಂದಿನ ಪರಿಸ್ಥಿತಿಗೆ ಗ್ರಾ.ಪಂ. ನೇರ ಕಾರಣವಾಗಿದೆ ಎಂದು ಆರೋಪಿಸಿದ ಅವರು ಕೂಡಲೇ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳ ದಿದ್ದರೆ ಹೋರಾಟ ರೂಪಿಸುವದಾಗಿ ಎಚ್ಚರಿಸಿದರು.

ಗ್ರಾಮ ಸಮಿತಿ ಸದಸ್ಯ ರಮೇಶ್ ಮಾತನಾಡಿ, ಶಾಶ್ವತ ಸೂರಿನ ವ್ಯವಸ್ಥೆ ಕಲ್ಪಿಸುವದಾದರೆ ನದಿ ದಡದಿಂದ ತೆರಳುವದಾಗಿ ಕರಡಿಗೋಡು ಭಾಗದ ನಿವಾಸಿಗಳು ಕಳೆದ ವರ್ಷವೆ ಗ್ರಾ.ಪಂ ಮೂಲಕ ಜಿಲ್ಲಾಡಳಿತಕ್ಕೆ ಲಿಖಿತ ರೂಪದಲ್ಲಿ ತಿಳಿಸಿದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷಿಸಿರುವದರಿಂದ ಈ ಭಾಗದ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮನೆ ಕಳೆದುಕೊಂಡವರಿಗೆ ಸೂಕ್ತ ವ್ಯವಸ್ಥೆ ಆಗುವವರೆಗೆ ನಿರಾಶ್ರಿತರನ್ನು ಪರಿಹಾರ ಕೇಂದ್ರಗಳಿಂದ ಹೊರ ಕಳುಹಿಸಬಾರದು. 5 ಸಾವಿರ ರೂ. ಗಳಲ್ಲಿ ಬಾಡಿಗೆ ಮನೆಗಳು ಸಿಗುತ್ತಿಲ್ಲ. ಈ ಮೊತ್ತವನ್ನು 10 ಸಾವಿರಕ್ಕೆ ಏರಿಸಬೇಕು. ಬಾಡಿಗೆ ಮನೆಗಳಿಗೆ 59 ಸಾವಿರದಿಂದ 1 ಲಕ್ಷದ ವರೆಗೆ ಮುಂಗಡ ಹಣ ನೀಡಬೇಕಾಗಿರುವದ ರಿಂದ ಈ ಮೊತ್ತವನ್ನು ಸರಕಾರವೇ ನೀಡಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಸಮಿತಿ ಸದಸ್ಯ ಎನ್. ಮಂಜು ಇದ್ದರು.