*ಗೋಣಿಕೊಪ್ಪಲು, ಸೆ. 7: ಕೃಷಿಕ ಹಾಗೂ ಬೆಳೆಗಾರರ ಸಂಕಷ್ಟವನ್ನು ಮನವರಿಕೆ ಮಾಡಿ ಸೂಕ್ತ ಪರಿಹಾರಕ್ಕೆ ಒತ್ತಾಯಿಸಲು ಜಿಲ್ಲಾಧಿಕಾರಿ ಬಳಿಗೆ ತಾ.ಪಂ.ನ ಸರ್ವ ಸದಸ್ಯರ ನಿಯೋಗ ತೆರಳಲು ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪೆÇನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಬೊಳ್ಳಚಂಡ ಸ್ಮಿತಾ ಪ್ರಕಾಶ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯಕ್ಕೆ ಸರ್ವ ಸದಸ್ಯರು ಒಪ್ಪಿದರು. ರೈತಾಪಿ ವರ್ಗ ಅತಿವೃಷ್ಟಿ ಯಿಂದ ಬಹಳಷ್ಟು ಸಂಕಷ್ಟ ಪರಿಸ್ಥಿತಿ ಯನ್ನು ಎದುರಿಸುತ್ತಿದೆ. ಸರ್ಕಾರದಿಂದ ಬರುವ ಅನುದಾನಗಳು ರೈತನ ಕೈಸೇರುತ್ತಿಲ್ಲ. (ಮೊದಲ ಪುಟದಿಂದ) ವಿಳಂಬವಾಗುತ್ತಿದೆ. ಹೀಗಾಗಿ ಸಂಕಷ್ಟದಲ್ಲಿರುವ ಬೆಳೆಗಾರ ಹಾಗೂ ರೈತರ ಅನುದಾನಗಳನ್ನು ಅಲ್ಪ ಸಮಯದೊಳಗೆ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಸಲ್ಲಿಸಲು ಸಭೆ ಒಮ್ಮತದ ತೀರ್ಮಾನ ಕೈಗೊಳ್ಳಬೇಕೆಂದು ಸದಸ್ಯ ಮಾಲೇಟ್ಟಿರ ಪ್ರಶಾಂತ್ ಉತ್ತಪ್ಪ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ದಿನಾಂಕ ನಿಗದಿಪಡಿಸಿ ನಿಯೋಗ ತೆರಳಲು ಸದಸ್ಯರು ತೀರ್ಮಾನಿಸಿದರು.

ಪರಿಹಾರ ಅರ್ಜಿಗಳನ್ನು ವಿಲೇವಾರಿ ಮಾಡಲು ವಿಳಂಬ ಮಾಡುವದು ಬೇಡ. ಶೀಘ್ರಗತಿಯಲ್ಲಿ ಅರ್ಜಿಗಳ ವಿಲೇವಾರಿ ಪ್ರಗತಿ ಕಾಣಲಿದೆ. ಕಳೆದ ಬಾರಿಯ ಅರ್ಜಿಗಳಿಗೆ ಪರಿಹಾರ ದೊರೆತಿಲ್ಲ. ಕೆಲವರು ಭತ್ತ ಬೆಳೆಯದೇ ಇದ್ದರೂ ಪರಿಹಾರ ತೆಗೆದುಕೊಂಡಿದ್ದಾರೆ. ಆದರೆ ನೈಜ ಬೆಳೆಗಾರನಿಗೆ ಪರಿಹಾರ ತಲಪಿಲ್ಲ ಎಂದು ಸದಸ್ಯೆ ಸೀತಮ್ಮ ಸಭೆಯ ಗಮನ ಸೆಳೆದರು.

ಕಂದಾಯ ಇಲಾಖೆಯಲ್ಲಿ ಯಾವದೇ ಪ್ರಗತಿ ಕಾರ್ಯಗಳು ನಡೆಯುತ್ತಿಲ್ಲ. ಖಾಸಗಿ ಶ್ರೀನಿಧಿ ಸಂಸ್ಥೆಯ ವತಿಯಿಂದ ಕೆಲಸ ಕಾರ್ಯಗಳು ನಡೆಯುತ್ತಿದೆ. ಶ್ರೀನಿಧಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ನೆಟ್‍ವರ್ಕ್ ವ್ಯವಸ್ಥೆ ಕಂದಾಯ ಇಲಾಖೆಯಲ್ಲಿ ಸಿಗುವದಿಲ್ಲವೆಂದು ಪ್ರಶ್ನಿಸಿದ ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ಇದು ಕಮೀಷನ್ ಲೇವಾದೇವಿಯ ವ್ಯವಸ್ಥೆ ಎಂದು ಆರೋಪಿಸಿದರು.

ಕೆದಮಳ್ಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯ ಜನಾಂಗ ವಾಸವಾಗಿದ್ದು, ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಮತ್ತು ತಾತ್ಕಾಲಿಕವಾಗಿ ಮಳೆಗಾಲದಲ್ಲಿ ವಾಸಿಸಲು ಅನುಕೂಲ ವಾಗುವಂತೆ ಈ ಕುಟುಂಬಗಳಿಗೆ ಟಾರ್ಪಾಲ್‍ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಪರಿಶಿಷ್ಟ ವರ್ಗದ ಕಲ್ಯಾಣ ಅಧಿಕಾರಿಗೆ ಮಾಲೇಟ್ಟಿರ ಪ್ರಶಾಂತ್ ಸೂಚಿಸಿದರು.

ಸಹಕಾರ ಬ್ಯಾಂಕಿನಲ್ಲಿ ಸಾಲ ಪಡೆದ ಬೆಳೆಗಾರರ 32,900 ಅರ್ಜಿಗಳ ಪ್ರಕಾರ 254 ಕೋಟಿ 21 ಲಕ್ಷದ 91 ಸಾವಿರ ಸಾಲ ಮನ್ನಾಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ 10 ಸಾವಿರ ಸಾಲಗಾರರಿಗೆ ಸಾಲ ಮನ್ನಾವಾಗಿದೆ. 22 ಸಾವಿರ ಅರ್ಜಿಗಳ ಸಾಲ ಮನ್ನಾಕ್ಕೆ ಅನುದಾನ ಬರಬೇಕಾಗಿದೆ. ಕೆಲವು ಅರ್ಜಿಗ ಳೊಂದಿಗೆ ಸೂಕ್ತ ದಾಖಲಾತಿಗಳು ನೀಡದೇ ಇರುವದರಿಂದ ಅರ್ಜಿಗಳು ಪ್ರಗತಿ ಕಂಡಿಲ್ಲ ಎಂದು ಸಹಕಾರ ಇಲಾಖೆಯ ಅಧಿಕಾರಿ ಮೇಕೇರಿರ ಮೋಹನ್ ಸಭೆಗೆ ತಿಳಿಸಿದರು.

ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿಲ್ಲ. ಕಳೆದ 18 ದಿನಗಳ ಹಿಂದೆ ತಿತಿಮತಿಯಲ್ಲಿ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದಾಗ ಮರೋಣೋತ್ತರ ಪರೀಕ್ಷೆ ನಡೆಸಲು ಇಲ್ಲಿನ ವೈದ್ಯ ಸುರೇಶ್ ಎಂಬವರು ನಿರ್ಲಕ್ಷ್ಯ ತೋರಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಜಿತ್ ಕರುಂಬಯ್ಯ ತಾಲೂಕು ವೈದ್ಯಾಧಿಕಾರಿ ಯತಿರಾಜ್ ಅವರಿಗೆ ಕೋರಿದರು. ಇದಕ್ಕೆ ಉತ್ತರಿಸಿದ ಡಾ. ಯತಿರಾಜ್ ಹೀಗಾಗಲೇ ಈ ವಿಚಾರದ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗೆ ದೂರು ನೀಡಲಾಗಿದೆ. ಮುಂದಿನ ಕ್ರಮವನ್ನು ಜಿಲ್ಲಾ ವೈದ್ಯಾಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಸಭೆಗೆ ತಿಳಿಸಿದರು.

ಕಳೆದ ಎರಡು ತಿಂಗಳಿನಲ್ಲಿ ತಾಲೂಕಿನಾಧ್ಯಂತ ಸುಮಾರು 30ಕ್ಕೂ ಹೆಚ್ಚು ಜಾನುವಾರುಗಳ ಕಳವು ನಡೆದಿದ್ದು, ರೈತರು ಬಹಳ ನಷ್ಟ ಅನುಭವಿಸಿದ್ದಾರೆ. ಇದರ ಪರಿಹಾರಕ್ಕೆ ಕ್ರಮ ಕೈಗೊಳ್ಳುವದಾಗಿ ತಾಲೂಕು ಪಶುವೈದ್ಯಾಧಿಕಾರಿ ತಮ್ಮಯ್ಯ ಮಾಹಿತಿ ನೀಡಿದರು.

ತಾ. 11ರಂದು ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಜಾನುವಾರು ಗಳಲ್ಲಿ ಕಾಲು-ಬಾಯಿ ರೋಗ, ಕಂದು ರೋಗ ನಿಯಂತ್ರಣ ಮತ್ತು ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಮಯದಲ್ಲಿ ಗೋಣಿಕೊಪ್ಪಲು ಕೆ.ವಿ.ಕೆ. ಸಭಾಂಗಣದಲ್ಲಿಯೂ ಈ ಕಾರ್ಯಕ್ರಮ ನೇರಪ್ರಸಾರ ನಡೆಯಲಿ ರುವದಾಗಿ ಸಭೆಗೆ ತಿಳಿಸಿದರು. ಗೋಣಿಕೊಪ್ಪಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಹರಿದು ಹೋಗುವ ಕೀರೆ ಹೊಳೆ ದಡವನ್ನು ಒತ್ತುವರಿ ಮಾಡಲಾಗಿದೆ. ಇದನ್ನು ತೆರವುಗೊಳಿಸಲು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಮತ್ತು ಪಂಚಾಯಿತಿಯ ವಾಣಿಜ್ಯ ಮಳಿಗೆಗಳನ್ನು ಮರು ಟೆಂಡರ್ ಕರೆಯುವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ತಾ.ಪಂ. ಸದಸ್ಯ ಜಯಾ ಪೂವಯ್ಯ ಸಭೆಯಲ್ಲಿ ಒತ್ತಾಯಿಸಿದರು. ಸಭೆಯ ಆರಂಭದಲ್ಲಿ ಪ್ರವಾಹದಲ್ಲಿ ಬಲಿಯಾದವರಿಗೆ ಸಂತಾಪ ಸೂಚಿಸಲಾಯಿತು.

ಈ ಬಾರಿಯ ಮಳೆಯ ತೀವ್ರತೆಗೆ ಬಹಳಷ್ಟು ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‍ಫಾರ್ಮರ್‍ಗಳು ದುರಸ್ತಿ ಗೊಂಡಿದೆ ಎಂದು ಚೆಸ್ಕಾಂ ಸಹಾಯಕ ಇಂಜಿನಿಯರ್ ಅಂಕಯ್ಯ ತಿಳಿಸಿದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಷಣ್ಮುಗಂ ಸೇರಿದಂತೆ ತಾ.ಪಂ ಸದಸ್ಯರು ಮತ್ತು ಅಧಿಕಾರಿಗಳು ಹಾಜರಿದ್ದರು.