ಸೋಮವಾರಪೇಟೆ, ಸೆ. 7: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ವತಿಯಿಂದ ಸುಮಾರು ರೂ. 1.53 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರೈತ ಭವನ ಹಾಗೂ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭ ತಾ. 9 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಶಾಸಕ ಅಪ್ಪಚ್ಚು ರಂಜನ್ ಅವರು ಕಟ್ಟಡವನ್ನು ಉದ್ಘಾಟಿಸ ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ವಿಶೇಷ ಆಹ್ವಾನಿತರಾಗಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಜಿ ಸಚಿವ ಟಿ. ಜಾನ್. ಬಿ.ಎ. ಜೀವಿಜಯ, ರಾಜ್ಯ ಸರ್ಕಾರಿ ಅಭಿಯೋಜಕರಾದ ಹೆಚ್.ಎಸ್. ಚಂದ್ರಮೌಳಿ, ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನ ರಾಜ್ಯಾಧ್ಯಕ್ಷ ಕೆ.ಷಡಕ್ಷರಿ, ವ್ಯವಸ್ಥಾಪಕ ನಿರ್ದೇಶಕ ಎ.ಸಿ. ದಿವಾಕರ್, ಕಾಸ್ಕಾರ್ಡ್ ಬ್ಯಾಂಕ್‍ನ ಜಿಲ್ಲಾ ಪ್ರತಿನಿಧಿ ಹೆಚ್.ಟಿ. ಮಂಜುನಾಥ್, ವ್ಯವಸ್ಥಾಪಕರಾದ ವಸಂತ, ಸಹಕಾರ ಸಂಘಗಳ ಉಪನಿಬಂಧಕ ಡಾ. ಉಮೇಶ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ಪಿಕಾರ್ಡ್‍ನಲ್ಲಿ ಒಟ್ಟು 11,500 ಸದಸ್ಯರಿದ್ದು, ರೈತರ ಸರ್ವತೋಮುಖ ಅಭಿವೃದ್ಧಿಯಲ್ಲಿ ಬ್ಯಾಂಕ್ ಸೇವೆ ಸಲ್ಲಿಸುತ್ತಿದೆ. ಬ್ಯಾಂಕ್‍ನ ಕಟ್ಟಡ ನಿಧಿ, ಸರ್ಕಾರದ ಅನುದಾನ ದಿಂದ ಕಟ್ಟಡ ನಿರ್ಮಿಸಲಾಗಿದೆ. ಶಾಸಕರ ಹಾಗೂ ಸಂಸದರ ನಿಧಿಯಿಂದ ತಲಾ ರೂ. 5 ಲಕ್ಷ, ಮಾಜಿ ಸಚಿವ ಟಿ. ಜಾನ್‍ರವರ ರೂ. 5 ಲಕ್ಷ ಸಹಕಾರ ಇಲಾಖೆಯಿಂದ ರೂ. 9 ಲಕ್ಷ ದೊರಕಿದೆ ಎಂದು ಹೇಳಿದರು. ಒಟ್ಟು 1.75 ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣ ಮತ್ತು ರೈತ ಭವನಕ್ಕೆ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ರೂ. 1.53 ಕೋಟಿ ವೆಚ್ಚದ ಕಾಮಗಾರಿ ನಿರ್ವಹಿಸಲಾಗಿದೆ. ಇನ್ನೂ ಸಹ ಲಿಫ್ಟ್ ಸೇರಿದಂತೆ ಕೆಲವೊಂದು ಕಾಮಗಾರಿ ಗಳು ಬಾಕಿ ಉಳಿದಿದ್ದು, ಶಾಸಕ ರಂಜನ್ ಮತ್ತು ಸಂಸದ ಪ್ರತಾಪ್‍ಸಿಂಹ ಅವರುಗಳು ಹೆಚ್ಚುವರಿ ಯಾಗಿ ತಲಾ 5 ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದರು. ಸಂಘದ ವಾರ್ಷಿಕ ಮಹಾಸಭೆ ತಾ. 19ರಂದು ಪೂರ್ವಾಹ್ನ 11 ಗಂಟೆಗೆ ಸಂಘದ ಸಭಾಂಗಣದಲ್ಲಿ ನಡೆಯಲಿದ್ದು, ಬ್ಯಾಂಕ್‍ನ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಪುರುಷೋತ್ತಮ್ ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬಿ.ಜಿ. ಪೂವಮ್ಮ, ನಿರ್ದೇಶಕರಾದ ಹೆಚ್.ಬಿ. ಶಿವಕುಮಾರ್, ಬಿ.ಬಿ. ಸತೀಶ್, ಬಿ.ಈ. ಬೋಪಯ್ಯ, ಕೆ.ಆರ್. ಕೊಮಾರಪ್ಪ, ಭಗವಾನ್, ವ್ಯವಸ್ಥಾಪಕ ಶಿವಕುಮಾರ್ ಅವರುಗಳು ಉಪಸ್ಥಿತರಿದ್ದರು.