ಮಡಿಕೇರಿ, ಸೆ. 7: ಇತ್ತೀಚೆಗೆ ಕಡಗದಾಳು ವಿನಲ್ಲಿ ಕಾಡಾನೆ ಧಾಳಿಗೊಳಗಾಗಿದ್ದ ಜಿಲ್ಲಾ ಪೊಲೀಸ್ ಶಸಸ್ತ್ರದಳದ ಸಹಾಯಕ ಠಾಣಾಧಿಕಾರಿ ಚನ್ನಕೇಶವ (48) ಅವರು ಕಳೆದ ರಾತ್ರಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಕಡಗದಾಳುವಿನ ಪೊಲೀಸ್ ನಿಸ್ತಂತು ಪರಿವರ್ತನಾ ಉಪ ಕೇಂದ್ರದಲ್ಲಿ ತಂಗಿದ್ದ ಚನ್ನಕೇಶವ ಅವರು, ತಾ. 3ರಂದು ಬೆಳಗ್ಗಿನ ಜಾವ 2.30ರ ಸುಮಾರಿಗೆ ಕರ್ತವ್ಯದಲ್ಲಿದ್ದ ಸಂದರ್ಭ ಹಠಾತ್ ಕಾಡಾನೆ ಧಾಳಿ ನಡೆಸಿ ಎದೆ ಹಾಗೂ ಎಡತೊಡೆ, ಬಲಗಾಲಿಗೆ ಘಾಸಿಗೊಳಿಸಿತು. ಗಾಯಗೊಂಡ ಚನ್ನಕೇಶವ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಸುಳ್ಯ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ನಿನ್ನೆ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಪೊಲೀಸ್ ಗೌರವ ವಂದನೆಯೊಂದಿಗೆ ಮೃತರ ಸ್ವಗ್ರಾಮ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯಲ್ಲಿ ನೆರವೇರಿತು. ಕರ್ತವ್ಯದಲ್ಲಿದ್ದ ವೇಳೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ನಿಯಮಾನುಸಾರ ಇಲಾಖೆಯಿಂದ ಸಿಗಬೇಕಾದ ಪರಿಹಾರಧನ ಮೃತರ ಕುಟುಂಬಕ್ಕೆ ಸಿಗಲಿದೆ ಎಂದು ಎಸ್ಪಿ ಸುಮನ್ ಡಿ. ಪಣ್ಣೇಕರ್ ತಿಳಿಸಿದ್ದಾರೆ. ಅರಣ್ಯ ಇಲಾಖೆಯಿಂದ ಕಾಡಾನೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದೆಂದು ಡಿಎಫ್‍ಓ ಪ್ರಭಾಕರನ್ ತಿಳಿಸಿದ್ದಾರೆ.

ಆನೆ ಪುಂಡಾಟ : ಕಡಗದಾಳು ವ್ಯಾಪ್ತಿ ಯಲ್ಲಿ ಕಾಡಾನೆಯೊಂದು ನಿರಂತರವಾಗಿ ದಾಂಧಲೆ ನಡೆಸುತ್ತಿದೆ. ಗಣೇಶ್ ಚತುರ್ಥಿಯಂದು ರಾತ್ರಿ 2.45ರ ವೇಳೆಗೆ ಹೊಸನಗರದಿಂದ ಆಗಮಿಸಿ ಮಡಿಕೇರಿ ಬಸ್ ನಿಲ್ದಾಣದಿಂದ ಆಟೋವೊಂದರಲ್ಲಿ ಮೋದೂರಿಗೆ ಜಿ.ಟಿ. ದಿವಾಕರ್ ಎಂಬವರು ತೆರಳುತ್ತಿದ್ದ ವೇಳೆ ಕೊಡಗು ವಿದ್ಯಾಲಯ ಶಾಲೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ದಿಢೀರನೆ ಕಾಡಾನೆ ಕಾಣಿಸಿಕೊಂಡು ಧಾಳಿ ಮಾಡಿದೆ. ಸೊಂಡಿಲಿನಿಂದ ಆಟೋವನ್ನು ಕುಕ್ಕಿದೆ. ಇದರಿಂದ ಗಾಬರಿಗೊಂಡ ಆಟೋದಲ್ಲಿದ್ದ ಇಬ್ಬರು ಚಾಲಕರು ಓಡಿ ತಪ್ಪಿಸಿಕೊಂಡಿದ್ದಾರೆ. ದಿವಾಕರ್ ಅವರೂ ಕೂಡ ಆನೆಯ ಕಣ್ತಪ್ಪಿಸಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಆಟೋ ಚಾಲಕರು ಕೂಡ ಸ್ನೇಹಿತರಿಗೆ ಕರೆ ಮಾಡಿದ್ದು, ಕಾರೊಂದರಲ್ಲಿ ಸ್ನೇಹಿತರು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಕಾರಿನಲ್ಲಿ ದಿವಾಕರ್ ಹಾಗೂ ಇತರರು ಅಲ್ಲಿಂದ ತೆರಳಿದ್ದಾರೆ. ಬಳಿಕ ಕಾಡಾನೆಯು ಕೊಡಗು ವಿದ್ಯಾಲಯದ ಬಳಿಯಿರುವ ಅಂಚೆ ಇಲಾಖೆಯ ಉಪ ಕಚೇರಿಗೆ ತೆರಳಿ ಅಲ್ಲಿಯೂ ದಾಂಧಲೆ ನಡೆಸಿ ಕಾಂಪೌಂಡ್‍ಗೆ ಹಾನಿ ಮಾಡಿದೆ. ಇದೇ ಆನೆ ಪೊಲೀಸ್ ಅಧಿಕಾರಿ ಚನ್ನಕೇಶವ ಅವರ ಸಾವಿಗೂ ಕಾರಣವಾಗಿದೆ.