ಸೋಮವಾರಪೇಟೆ, ಸೆ.6: ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಜಾರಿ ನಿರ್ದೇಶನಾಲಯದಿಂದ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ತಾ. 9ರಂದು ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜಕೀಯ ದ್ವೇಷದಿಂದ ಬಂಧಿಸಿದ್ದಾರೆ. ಉದ್ಯಮಿಯೂ ಆಗಿರುವ ಶಿವಕುಮಾರ್ ಅವರು ಸಂಪಾದಿಸಿರುವ ಆಸ್ತಿಯನ್ನೇ ತಮ್ಮ ಅಸ್ತ್ರವನ್ನಾಗಿ ಬಳಸಿಕೊಂಡು ಕೇಂದ್ರ ಸರ್ಕಾರ ಕಾಂಗ್ರೆಸ್ ಮೇಲೆ ಸವಾರಿ ಮಾಡಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದಾಗಿ ದೇಶದಲ್ಲಿ ಉದ್ಯೋಗ ಕಡಿತ ಉಂಟಾಗುತ್ತಿದೆ. ಅಧಿಕಾರಕ್ಕೆ ಬಂದರೆ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವದಾಗಿ ಹೇಳಿದ್ದ ಮೋದಿ ಅವರು, ಇದೀಗ ವರ್ಷಕ್ಕೆ 3 ಕೋಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಹಂತಕ್ಕೆ ದೇಶವನ್ನು ತಂದಿಟ್ಟಿದ್ದಾರೆ ಎಂದು ದೂರಿದರು.

ನೋಟ್ ಬ್ಯಾನ್ ಹಾಗೂ ಅವೈಜ್ಞಾನಿಕ ಜಿಎಸ್‍ಟಿಯಿಂದಾಗಿ ಹಲವಷ್ಟು ಉದ್ಯಮಗಳು ನೆಲಕ್ಕಚ್ಚಿದ್ದು, ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಹಳ್ಳಿಯಿಂದ ಡೆಲ್ಲಿಯವರೆಗೂ ಸಂಕಷ್ಟ ಎದುರಾಗಿದೆ. ಜೀವ ವಿಮೆಗೂ ಸಹ ಜಿಎಸ್‍ಟಿ ಅಳವಡಿಸುವ ಮೂಲಕ ದೇಶದ ಜನರನ್ನು ಮೋದಿ ಸರ್ಕಾರ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.

ಪ್ರವಾಹ ಸಂದರ್ಭ ಕರ್ನಾಟಕಕ್ಕೆ ಭೇಟಿ ನೀಡದೇ ರಾಜ್ಯದ ರೈತರನ್ನು ನಿರ್ಲಕ್ಷಿಸಿರುವ ಮೋದಿ ಸರ್ಕಾರದ ವಿರುದ್ದ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಪ್ರವಾಹದಿಂದ ಹಾನಿಗೀಡಾದವರಿಗೆ ಕೇವಲ 10 ಸಾವಿರ ಪರಿಹಾರ ಒದಗಿಸುತ್ತಿದ್ದು, ಇದನ್ನು 1ಲಕ್ಷಕ್ಕೆ ಏರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಲೋಕೇಶ್ ಹೇಳಿದರು.

ತಾ. 9ರಂದು ಪೂರ್ವಾಹ್ನ 10.30ರಿಂದ ಪಕ್ಷದ ಕಚೇರಿಯಿಂದ ಪಟ್ಟಣದ ಪ್ರಮುಖ ಮಾರ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವದು. ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಹ ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿದ್ದ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿ.ಎ. ಲಾರೆನ್ಸ್ ಮಾತನಾಡಿ, ದೇಶಾದ್ಯಂತ ಬ್ಯಾಂಕಿಂಗ್ ವ್ಯವಹಾರ ಹದಗೆಡುತ್ತಿದ್ದು, ಬ್ಯಾಂಕ್‍ಗಳು ಭಯೋತ್ಪದನೆಯ ತಾಣವಾಗುತ್ತಿವೆ. ಬ್ಯಾಂಕ್‍ಗಳಲ್ಲಿ ಠೇವಣಿ ಇಡಲೂ ಸಹ ಸಾರ್ವಜನಿಕರು ಹೆದರುತ್ತಿದ್ದಾರೆ. ದೇಶಾದ್ಯಂತ ಇರುವ ಅವೈಜ್ಞಾನಿಕ ತೆರಿಗೆ ಇಳಿಸಬೇಕು ಎಂದು ಒತ್ತಾಯಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಮಾತನಾಡಿ, ಸಿಬಿಐ ಮತ್ತು ಇ.ಡಿ. ಸಂಸ್ಥೆಗಳು ಬಿಜೆಪಿಯ ಅಂಗ ಪಕ್ಷಗಳೆಂಬಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ.ಈ. ಜಯೇಂದ್ರ, ಬ್ಲಾಕ್ ಉಪಾಧ್ಯಕ್ಷ ಸತೀಶ್, ಪ.ಪಂ. ಸದಸ್ಯ ಉದಯಶಂಕರ್ ಅವರುಗಳು ಉಪಸ್ಥಿತರಿದ್ದರು.