ಮಡಿಕೇರಿ, ಸೆ. 4: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗದಲ್ಲಿ ‘ರೋಟಾ’ ವೈರಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಅವರು ಮಗುವಿಗೆ ‘ರೋಟಾ’ ವೈರಸ್ ಲಸಿಕೆ ನೀಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಆನಂದ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಶಿವಕುಮಾರ್, ಡಾ. ಎ.ಸಿ. ಶಿವಕುಮಾರ್ ಉಪಸ್ಥಿತರಿದ್ದರು. ಮಕ್ಕಳಲ್ಲಿ ‘ರೋಟಾ’ ವೈರಸ್ ಬೇಧಿ (ಅತಿಸಾರ ಬೇಧಿ) ನಿಯಂತ್ರಣಕ್ಕಾಗಿ ‘ರೋಟಾ’ ವೈರಸ್ ಲಸಿಕೆ ನೀಡಲಾಗುತ್ತಿದೆ. ರೋಟಾ ವೈರಸ್ ಒಂದು ಅತಿ ಹೆಚ್ಚು ಹರಡಬಲ್ಲ ವೈರಾಣು, ಇದು ಮಕ್ಕಳಲ್ಲಿ ಬೇಧಿಯಾಗಲು ಅತಿ ದೊಡ್ಡ ಕಾರಣವಾಗಿದೆ. ‘ರೋಟಾ’ ವೈರಸ್ ಸೋಂಕಿನ ಆರಂಭ ಕಡಿಮೆ ಪ್ರಮಾಣದ ಬೇಧಿಯಿಂದ ಆಗುತ್ತದೆ. ಮುಂದೆ ಅದು ಗಂಭೀರ ಸ್ವರೂಪಕ್ಕೆ ತಿರುಗಬಹುದು. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಎಂದರು.

ಸೂಕ್ಷ್ಮ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಶರೀರದಲ್ಲಿ ನೀರು ಮತ್ತು ಲವಣಾಂಶದ ಕೊರತೆ ಉಂಟಾಗಬಹುದು ಹಾಗೂ ಕೆಲವು ಸಂದರ್ಭಗಳಲ್ಲಿ ಮಕ್ಕಳು ಸಾವಿಗೀಡಾಗಬಹುದು. ಆದ್ದರಿಂದ ಸಾರ್ವಜನಿಕ ಲಸಿಕಾ ಕಾರ್ಯಕ್ರಮಕ್ಕೆ ಈ ಲಸಿಕೆಯನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ ಮೋಹನ್ ತಿಳಿಸಿದರು. ಲಸಿಕೆಯನ್ನು 6ನೇ ವಾರದ ಮಕ್ಕಳಿಗೆ ಒಪಿವಿ, ಆರ್‍ವಿವಿ, ಐಪಿವಿ, ಪೆಂಟಾವೆಲೆಂಟ್, 10ನೇ ವಾರದ ಮಕ್ಕಳಿಗೆ ಓಪಿವಿ, ಆರ್‍ವಿವಿ, ಪೆಂಟಾವೆಲೆಂಟ್. 14ನೇ ವಾರದ ಮಕ್ಕಳಿಗೆ ಒಪಿವಿ, ಆರ್‍ವಿವಿ, ಐಪಿವಿ, ಪೆಂಟಾವೆಲೆಂಟ್ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.