ಸೋಮವಾರಪೇಟೆ, ಸೆ. 5: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ಅವರ ನಿಧನಕ್ಕೆ, ಎ.ಕೆ. ಸುಬ್ಬಯ್ಯ ಅಭಿಮಾನಿಗಳ ಸಂಘದ ವತಿಯಿಂದ ಸಂತಾಪ ಸಭೆ ನಡೆಯಿತು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಎ.ಕೆ. ಸುಬ್ಬಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ, ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಂತಾಪ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಎ.ಕೆ. ಸುಬ್ಬಯ್ಯ ಅವರ ಅಭಿಮಾನಿಗಳು, ಎಕೆಎಸ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು, ಅವರ ಸಿದ್ಧಾತ, ಹೋರಾಟಗಳನ್ನು ಮುಂದುವರೆಸುವಂತೆ ತೀರ್ಮಾನಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಮನುಷ್ಯ ಪ್ರೀತಿ ಸಮಾಜಕ್ಕೆ ಬೇಕು ಎಂಬದನ್ನು ಸಾಧಿಸಿ ತೋರಿಸಿದ ಎ.ಕೆ. ಸುಬ್ಬಯ್ಯ ಅವರು, ಶೋಷಿತರ ಪರವಾಗಿ ಹೋರಾಟ ಮಾಡಿಕೊಂಡೇ ಬಂದವರು ಎಂದು ಸ್ಮರಿಸಿದರು. ಸಿದ್ದಾಪುರದ ಭರತ್ ಮಾತನಾಡಿ, ಸುಬ್ಬಯ್ಯ ಅವರು ಕೊಡಗಿನಲ್ಲಿನ ಜೀತ ಪದ್ಧತಿ ವಿರುದ್ಧ ಹೋರಾಟ ಮಾಡಿದ ಏಕೈಕ ವ್ಯಕ್ತಿಯಾಗಿದ್ದರು ಎಂದರು. ನಿರ್ವಾಣಪ್ಪ ಮಾತನಾಡಿ, ಕೊಡಗಿನ ಆದಿವಾಸಿಗಳು, ರೈತರು, ಶೋಷಿತರು, ಆದಿವಾಸಿಗಳನ್ನು ಬೆಳಕಿಗೆ ಕರೆತಂದ ಕೀರ್ತಿ ಎಕೆಎಸ್ ಅವರಿಗೆ ಸಲ್ಲಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಕನಸ್ಸನ್ನು ನನಸು ಮಾಡಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಬೋವಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಜಿತ್, ಪ್ರಮುಖರಾದ ಆದಂ, ಕೆ.ಎ. ಯಾಕೂಬ್, ಜಯಪ್ಪ ಹಾನಗಲ್, ಬಸಪ್ಪ, ಅಬ್ಬಾಸ್, ರವೀಶ್, ಹೆಚ್.ಎ. ನಾಗರಾಜು, ಹೆಚ್.ಎಂ. ಸೋಮಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
*ಗೋಣಿಕೊಪ್ಪಲು: ಇತ್ತೀಚಿಗೆ ನಿಧನರಾದ ಹೋರಾಟಗಾರ, ಶೋಷಿತ ಜನಾಂಗದ ನ್ಯಾಯಪರ ಚಿಂತಕ ಎ.ಕೆ. ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಇಲ್ಲಿನ ಕಾಮತ್ ನವಮಿ ಸಭಾಂಗಣದಲ್ಲಿ ಜರುಗಿತು.
ಸುಬ್ಬಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಬಿ.ಎನ್. ಮನುಶೆಣೈ, ಸುಬ್ಬಯ್ಯನವರ ಆದರ್ಶ ಚಿಂತನೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಎಲ್ಲರೂ ಒಂದಾಗಿ ಅವರ ಆಶಯಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದರು.
ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ ಸುಬ್ಬಯ್ಯನವರು ಎಂಥ ಕ್ಲಿಷ್ಟಕರ ಸನಿವೇಶದಲ್ಲೂ ಎದೆಗುಂದುತ್ತಿರಲಿಲ್ಲ. ಅವರಲ್ಲಿದ್ದ ಸತ್ಯ ಮತ್ತು ಪ್ರಾಮಾಣಿಕತೆ ಬಹು ದೊಡ್ಡ ಶಕ್ತಿಯಾಗಿದ್ದವು. ಶ್ರಮವನ್ನು ಸಂಪತ್ತಾಗಿಸಿಕೊಂಡು ಅದನ್ನು ಮರಳಿ ಸಮಾಜಕ್ಕೂ ನೀಡಿದರು. ಅವರ ಸಾರ್ಥಕ ಬದುಕು ಇತರರಿಗೆ ಮಾದರಿಯಾಗಿದೆ. ಅವರ ವಿಚಾರ ಬಗೆಗೆ ನಿರಂತರವಾಗಿ ಕಾರ್ಯಕ್ರಮ ಮಾಡುವ ಮೂಲಕ ಸುಬ್ಬಯ್ಯನವರ ಆದರ್ಶಗಳು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು ಎಂದರು.
ಗಿರಿಜನ ಮುಖಂಡ ಪಿ.ಎಸ್.ಮುತ್ತ ಮಾತನಾಡಿ ಸುಬ್ಬಯ್ಯನವರು ಅರಣ್ಯ ಹಕ್ಕು ಸೇರಿದಂತೆ ಅವರಿಗೆ ಭೂಮಿ ಮತ್ತು ವಸತಿ ಕಲ್ಪಿಸಿಕೊಡಲು ಅವಿರತವಾಗಿ ಶ್ರಮಿಸಿದರು. ಅವರ ಹೋರಾಟದ ಫಲವಾಗಿ ಸಾವಿರಾರು ಗಿರಿಜನರು ಬಸವನಹಳ್ಳಿ, ಗುಡ್ಡೆಹೊಸೂರು ಮೊದಲಾದ ಕಡೆ ಸ್ವಂತ ಮನೆ ಹೊಂದಲು ಸಾಧ್ಯವಾಯಿತು. ಅವರ ಪ್ರತಿಮೆಯನ್ನು ಗೋಣಿಕೊಪ್ಪಲಿನಲ್ಲಿ ಸ್ಥಾಪಿಸಬೇಕು ಎಂದು ಹೇಳಿದರು. ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ ಸುಬ್ಬಯ್ಯನವರಿಗೆ ರಾಜಕೀಯದಲ್ಲಿ ಮಿತ್ರರಿಗಿಂತ ಶತ್ರುಗಳೇ ಹೆಚ್ಚು. ಆದರೂ ಸುಬ್ಬಯ್ಯ ಅವರ ನೇರ ನಡೆನುಡಿ ಮತ್ತು ವಿಚಾರಗಳಿಗೆ ಮಾರು ಹೋಗಿ ಬಹಳಷ್ಟು ಶತ್ರುಗಳು ಮಿತ್ರರಾಗಿದ್ದರು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ದಸಂಸ ಜಿಲ್ಲಾ ಸಂಚಾಲಕ, ಪರಶುರಾಮ್, ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಕಾಶ್, ಮುಖಂಡರಾದ ಅಬ್ದುಲ್ ಸಮ್ಮದ್, ಬಾಪು, ತನ್ವೀರ್, ಪ್ರಮೋದ್ ಕಾಮತ್, ರಾಜಾರಾವ್, ಚಂದನ್ ಕಾಮತ್, ಪ್ರದೀಪ್ ಕಾಮತ್, ಪ್ರಜ್ಞಾಕಾಮತ್, ಚೇತನ್ ಪೈ, ವಕೀಲ ಪ್ರವೀಣ್ ಹಾಜರಿದ್ದರು.