ಮಡಿಕೇರಿ, ಸೆ. 5: ಮಹಾಮಳೆಗೆ ಮನೆಗಳು ಕುಸಿದು ನೆಲೆ ಕಳೆದುಕೊಂಡಿರುವ ಬಡವರ್ಗದ ಸಂತ್ರಸ್ತರಿಗೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ನಿವೇಶನ ಒದಗಿಸಬೇಕು ಮತ್ತು ತುರ್ತಾಗಿ ತಲಾ ರೂ. ಒಂದು ಲಕ್ಷ ನೆರವನ್ನು ವಿತರಿಸಬೇಕೆಂದು ಸಿಪಿಐಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಇ.ರಾ. ದುರ್ಗಾಪ್ರಸಾದ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಾಶ್ರಿತ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ತಕ್ಷಣ ನೆರವು ನೀಡಬೇಕೆಂದು ಒತ್ತಾಯಿಸಿದರು. ಸಂತ್ರಸ್ತರು ನಡೆಸುವ ಎಲ್ಲಾ ಹೋರಾಟಗಳಿಗೆ ಸಿಪಿಐಎಂ ಪಕ್ಷ ಬೆಂಬಲ ನೀಡಲಿದೆ ಎಂದರು. ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ವಾಸಿಸುತ್ತಿರುವ ಸಂತ್ರಸ್ತರನ್ನು ಪರಿಹಾರ ಕೇಂದ್ರದಿಂದ ಹೊರದಬ್ಬುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸೂಕ್ತ ನೆಲೆ ದೊರಕುವಲ್ಲಿಯವರೆಗೆ ಪರಿಹಾರ ಕೇಂದ್ರಗಳಿಂದ ಯಾರನ್ನೂ ಕಳುಹಿಸಬಾರದೆಂದು ಒತ್ತಾಯಿಸಿದರು.
ಸಂತ್ರಸ್ತರ ಬಾಡಿಗೆ ಹಣದ ಮೊತ್ತವನ್ನು ರೂ. 10 ಸಾವಿರಗಳಿಗೆ ಏರಿಕೆ ಮಾಡಬೇಕು ಮತ್ತು ಬಾಡಿಗೆ ಮನೆಗಳ ಮುಂಗಡ ಹಣವನ್ನು ಕೂಡ ಸರಕಾರವೇ ಭರಿಸಬೇಕೆಂದು ಒತ್ತಾಯಿಸಿದ ಅವರು, ಭರವಸೆಗಳು ಬರವಣಿಗೆ ರೂಪದಲ್ಲಿ ಅಧಿಕೃತವಾಗಿ ಇರಲಿ ಎಂದರು. ಜಿಲ್ಲೆಯ ರೈತರು, ಸಣ್ಣ ಬೆಳೆಗಾರರು ಮಳೆಹಾನಿ ಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇವರುಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಸುಲಭ ಬಡ್ಡಿ ದರದಲ್ಲಿ ಹೊಸ ಸಾಲ ವಿತರಿಸಬೇಕು, ಭತ್ತಕ್ಕೆ ಬೆಂಬಲ ಬೆಲೆಯಾಗಿ ರೂ. 3 ಸಾವಿರ ಘೋಷಿಸಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಸಂಘಟನಾ ಸಮಿತಿ ಸದಸ್ಯ ಎ.ಸಿ. ಸಾಬು ಹಾಗೂ ಹೆಚ್.ಬಿ. ರಮೇಶ್ ಉಪಸ್ಥಿತರಿದ್ದರು.