ಸೋಮವಾರಪೇಟೆ: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಜಾಗೃತಿ ಸಂಸ್ಥೆಯ ಆಶ್ರಯದಲ್ಲಿ, ಸೂರ್ಲಬ್ಬಿ ನಾಡಿನ ಗ್ರಾಮಸ್ಥರ ಸಹಕಾರದೊಂದಿಗೆ ಸೂರ್ಲಬ್ಬಿ ಶಾಲಾ ಮೈದಾನದಲ್ಲಿ ಸುಂಟಿಕೊಪ್ಪ ವಲಯ ಮಟ್ಟದ ಅಂತರ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿದ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡಾಕೂಟ ಸಂಘಟಿಸಿರುವದು ಶ್ಲಾಘನೀಯ ಕಾರ್ಯ. ಕ್ರೀಡೆಯಿಂದ ಮಾನಸಿಕ-ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ ಎಂದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸೂರ್ಲಬ್ಬಿ ನಾಡಿನ ಅಧ್ಯಕ್ಷ ಮುದ್ದಂಡ ತಿಮ್ಮಯ್ಯ ಮಾತನಾಡಿ, ಮಕ್ಕಳ ಕ್ರೀಡೆಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಉತ್ತಮ ತರಬೇತಿ ಮೂಲಕ ಹೆಚ್ಚಿನ ಸಾಧನೆಗೆ ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗರ್ವಾಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎಂ. ಸುಭಾಷ್, ಇಂತಹ ಕ್ರೀಡಾಕೂಟಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸಲು ಸಹಕಾರಿಯಾಗಿವೆ ಎಂದು ಅಭಿಪ್ರಾಯಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಸಿ.ಜಿ. ಪಳಂಗಪ್ಪ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಸದಸ್ಯೆ ಟಿ.ಟಿ. ಮಾಯಮ್ಮ ಕ್ರೀಡಾಜ್ಯೋತಿ ಬೆಳಗಿಸಿದರು. ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ವೆಂಕಟೇಶ್ ನಾಯ್ಕ್, ತಾ.ಪಂ. ಸದಸ್ಯೆ ತಂಗಮ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ಸಂಘದ ತಾಲೂಕು ಘಟಕದ ಅಧ್ಯಕ್ಷ ಡಿ.ಪಿ. ಧರ್ಮಪ್ಪ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎ. ಲಕ್ಷ್ಮಣ್ ಮಾತನಾಡಿದರು.
ಶಾಲೆಯ ಹಳೆಯ ವಿದ್ಯಾರ್ಥಿನಿಯೂ ಆದ ರಾಜ್ಯಮಟ್ಟದ ಅಥ್ಲಿಟ್ ಎನ್.ಬಿ. ರುಕ್ಮಿಣಿ ಪಥಸಂಚಲನದಲ್ಲಿ ಕ್ರೀಡಾ ಜ್ಯೋತಿಯನ್ನು ಹಿಡಿದು ಸಾಗಿದರು. ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಲೀಲಾ, ಪ್ರಾಥಮಿಕ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಪಿ.ಕೆ. ರವಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬಿ.ಎಂ. ಸುಂದರಿ, ಸಿ.ಆರ್.ಪಿ. ಬಿ.ಎನ್. ವಸಂತ್‍ಕುಮಾರ್, ಜಾಗೃತಿ ಸಂಸ್ಥೆಯ ಪ್ರಮುಖರಾದ ಕಣ್ಣನ್, ಸಂಪತ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ ದಿನೇಶ್ ನಾಯ್ಕ್, ಪದಾಧಿಕಾರಿ ನವೀನ್, ಸ್ಥಳೀಯರಾದ ನಾಣಿಯಪ್ಪ, ಕಮಲ, ನಿವೃತ್ತ ಸೇನಾಧಿಕಾರಿ ಗಪ್ಪು ಸೋಮಯ್ಯ, ಕ್ರೀಡಾ ಸಂಚಾಲಕ ಕೆ.ಸಿ. ಮಂಜುನಾಥ್, ಶಿಕ್ಷಕ ಎಂ.ಟಿ. ಪೂವಯ್ಯ, ರಾಜ್ಯಮಟ್ಟದ ಕ್ರೀಡಾ ತರಬೇತುದಾರ ಶಿವಣ್ಣ, ಕೃಷ್ಣೇಗೌಡ ಇದ್ದರು.
ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಸ್ವಾಗತಿಸಿದರು. ಕೆ.ಡಿ. ರಜಿತ ಕಾರ್ಯಕ್ರಮ ನಿರ್ವಹಿಸಿದರು. ನಂತರ ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಪಂದ್ಯಾಟಗಳನ್ನು ನಡೆದವು.
ಮಡಿಕೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆಯ ರೋವರ್ಸ್ ಮತ್ತು ರೇಂಜರ್ಸ್‍ಗಳು ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.
ಶ್ರಮದಾನದಲ್ಲಿ ಸೀನಿಯರ್ ರೋವರ್‍ಮೆಟ್ ತಮ್ಮಯ್ಯ ನೇತೃತ್ವದ ಕಾಲೇಜಿನ 12 ರೋವರ್ಸ್ ಮತ್ತು 16 ರೇಂಜರ್ಸ್‍ಗಳು ಪಾಲ್ಗೊಂಡಿದ್ದರು. ರೋವರ್ ಲೀಡರ್ ವನಿತ್ ಕುಮಾರ್ ಮತ್ತು ರೇಂಜರ್ಸ್ ಲೀಡರ್ ರಾಖಿ ಪೂವಣ್ಣ ಮಾರ್ಗದರ್ಶನದಲ್ಲಿ ಶ್ರಮದಾನ ನಡೆಯಿತು.
ಕುಶಾಲನಗರ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಬೇಕು. ಹಾಗಿದ್ದಲ್ಲಿ ಮಾತ್ರ ಪ್ರತಿಭೆಗಳನ್ನು ಹುಡುಕುವ ಕೆಲಸ ಸಾರ್ಥಕವಾಗುತ್ತದೆ ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಹೇಳಿದರು.
ಗುಡ್ಡೆಹೂಸೂರಿನ ಸರಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ 2019-20ನೇ ಸಾಲಿನ ನಂಜರಾಯಪಟ್ಟಣ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಿ.ಆರ್.ಪಿ. ಸತ್ಯನಾರಾಯಣ್ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ಗುಡ್ಡೆಹೂಸೂರು ಗ್ರಾಮ ಪಂಚಾಯಿತಿ ಅಧಿಕಾರಿ ಶ್ಯಾಮ್. ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್, ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸಣ್ಣಸ್ವಾಮಿ, ಜಿಲ್ಲಾ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ವೆಂಕಟೇಶ, ಪ್ರಾಶುಂಪಾಲ ಚಂದ್ರಶೇಖರ್ ರೆಡ್ಡಿ ಹಾಜರಿದ್ದರು.
ರಾಷ್ಟ್ರ ಪ್ರಶಸ್ತಿ ಪಡೆದ ಆರ್. ವಿಜಯ ಅವರನ್ನು ಕ್ಲಷ್ಟರ್ ಮಟ್ಟದಿಂದ ಸನ್ಮಾನಿಸಲಾಯಿತು. 19 ಶಾಲೆಗಳ 696ಕ್ಕೂ ಅಧಿಕ ಮಕ್ಕಳು ಸೇರಿದಂತೆ 90 ಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದರು.
ಕರಿಕೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಿಕೆಯಲ್ಲಿ ಕರಿಕೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಜರುಗಿತು. ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಉದ್ಘಾಟಿಸಿ ಮಕ್ಕಳಿಗೆ ಸಿಗುವ ಈ ಅವಕಾಶಗಳನ್ನು ಎಲ್ಲಾರೂ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಮಡಿಕೇರಿ ಸಮೂಹ ಸಂಪನ್ಮೂಲ ಕೇಂದ್ರದ ಬಿ.ಆರ್.ಪಿ. ರಂಜಿತ್ ಸ್ಪರ್ಧೆಯ ಉದ್ದೇಶ ವಿವರಿಸಿದರು. ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲೆಯ ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಕಂಠಪಾಟ, ಅಭಿನಯ ಗೀತೆ, ಕೋಲಾಟ, ಜಾನಪದ ನೃತ್ಯ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳು ನಡೆದವು. ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಪ್ರಕಾಶ್ ವಹಿಸಿದ್ದರು. ತಾಲೂಕು ಐ.ಆರ್.ಪಿ. ಶಾಂತ, ಭಾಗಮಂಡಲ ಸಿ.ಆರ್.ಪಿ. ಬಸವರಾಜ್, ಶಾಲಾ ಮುಖ್ಯೋಪಾಧ್ಯಾಯಿನಿ ಕುಸುಮಾವತಿ, ಕಾಲೋನಿ ಶಾಲೆಯ ಮುಖ್ಯ ಶಿಕ್ಷಕ ಕುಮಾರ್ ಉಪಸ್ಥಿತರಿದ್ದರು. ಕರಿಕೆ ಕ್ಲಸ್ಟರ್ ಸಿ.ಆರ್.ಪಿ. ಕೆ.ಎಂ. ಲೋಕಪ್ರಭು ಸ್ವಾಗತಿಸಿ, ಶಿಕ್ಷಕ ಪ್ರವೀಣ್ ಕುಮಾರ್ ವಂದಿಸಿದರು.ಪಾಲಿಬೆಟ್ಟ: ಪಾಲಿಬೆಟ್ಟದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ 12 ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ವಿಜು ಸುಬ್ರಮಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಮುಂದೆ ಬರಬೇಕೆಂದರು.
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಭವಾನಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ನಡೆಯೊಂದಿಗೆ ಶಿಕ್ಷಣದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಶಿಸ್ತುಬದ್ಧ ಜೀವನದೊಂದಿಗೆ ಪರಿಸರ ಶುಚಿತ್ವವನ್ನು ಕಾಪಾಡಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಂ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಮಾಜಿ ಅಧ್ಯಕ್ಷ ವಸಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಗಣಪತಿ ,ಪ್ರಮುಖರಾದ ಸೆಲ್ವಿ, ಮಾದಪ್ಪ, ದೀಪಕ್, ಕ್ಲಸ್ಟರ್ ಅಧಿಕಾರಿ ಕರುಂಬಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೂಡಿಗೆ: ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಚಾರಿ ಉದ್ಯೋಗ ನೋಂದಣಿ ಕಾರ್ಯಕ್ರಮವನ್ನು ನಡೆಸಲಾಯಿತು.
ಜಿಲ್ಲಾ ಉದ್ಯೋಗಾಧಿಕಾರಿ ಜಗನ್ನಾಥ್ ಕಾಲೇಜಿನ ಪ್ರಥಮ, ದ್ವಿತೀಯ ಮತ್ತು ತೃತೀಯ ಬಿ.ಎ.ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ. ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡು, ಅವರಿಗೆ ಉದ್ಯೋಗ ಪತ್ರಗಳನ್ನು ವಿತರಿಸಿದರು. ಉದ್ಯೋಗ ಪತ್ರ ಪಡೆದ ವಿದ್ಯಾರ್ಥಿಗಳು ಕಾಲಕಾಲಕ್ಕೆ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಸ್ವರ್ಧಾತ್ಮಕ ಪರೀಕ್ಷೆಗಳಾದ ಐ.ಬಿ.ಪಿ.ಎಸ್., ಕೆ.ಎ.ಎಸ್. ಎಫ್.ಡಿ.ಎ. ಮತ್ತು ಬ್ಯಾಂಕಿಗ್ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕೆಂಬದರ ಬಗ್ಗೆ ಅವರು ಉಪನ್ಯಾಸ ನೀಡಿದರು. ಇನ್ನೂರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಉಪಯೋಗ ಪಡೆದುಕೊಂಡರು.
ಕಾಲೇಜಿನ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೋಶದ ಸಂಚಾಲಕಿ ದೀಪಾ ಟಿ.ಎಂ., ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಂಗಮೂರ್ತಿ ಹೆಚ್.ಬಿ., ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಕಾಶಿಕುಮಾರ್ ಪಿ.ಟಿ. ಹಾಗೂ ಎಲ್ಲಾ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.
ಸುಂಟಿಕೊಪ್ಪ: ಗದ್ದೆಹಳ್ಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 16 ವರ್ಷಗಳಿಂದ ಶಿಕ್ಷಕಿಯಾಗಿ, ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪುಷ್ಪಾ ಅವರನ್ನು ಗ್ರಾಮ ಪಂಚಾಯಿತಿ, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ, ತಾಲೂಕು ಶಿಕ್ಷಕ ಸಂಘ ವೃಂದದಿಂದ ಸನ್ಮಾನಿಸಿ, ಬೀಳ್ಕೋಡಲಾಯಿತು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ಬಲ್ಕೀಸ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾವತಿ, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷರಾದ ರೋಜ್‍ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಗ್ರಾ.ಪಂ. ಸದಸ್ಯರುಗಳಾದ ಕೆ.ಇ. ಕರೀಂ, ನಾಗರತ್ನ, ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೀತಾ ಪಾರ್ಥ, ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ.ಬಿ. ಪ್ರಕಾಶ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸೌಭಾಗ್ಯ, ಜಿಲ್ಲೆಯ ವಿಶೇಷಚೇತನ ವಿದ್ಯಾರ್ಥಿಗಳ ಅಧಿಕಾರಿ ವೆಂಕಟೇಶ್, ಸಿ.ಆರ್.ಪಿ. ಪುರಷೋತ್ತಮ್, ಶಾಂತಳ್ಳಿ ಕ್ಲಸ್ಟರ್ ಸಿಆರ್‍ಪಿ ಶಿವಲಿಂಗ, ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕರುಗಳಾದ ಹೇಮಾವತಿ, ಶೈಲಾಜ ಹಾಗೂ ಮತ್ತಿತರರು ಇದ್ದರು.
ಈ ಸಂದರ್ಭ ನಿವೃತ್ತ ಶಿಕ್ಷಕಿ ಪುಷ್ಪಾ ಹಾಗೂ ಅತಿಥಿಗಳು ಕಲ್ಪವೃಕ್ಷ ಸಸಿಯನ್ನು ಶಾಲಾ ಆವರಣದಲ್ಲಿ ನೆಟ್ಟರು.
ಕಡಂಗ: ಕೊಡಗು ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಇಲಾಖೆಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಗ್ರಾಮೀಣ ಕ್ರೀಡಾಕೂಟ ನೆರವೇರಿತು.
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಮಡಿಕೆ ಒಡೆಯುವ ಸ್ಪರ್ಧೆಯ ಮೂಲಕ ಉದ್ಘಾಟಿಸಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಚೆಯ್ಯಂಡಾಣೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಡ ವಿಜಯ ಪ್ರೌಢಶಾಲೆ ಕಡಂಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಉಪಾಧ್ಯಕ್ಷ ರತೀಶ್ ಕುಮಾರ್, ತಾ.ಪಂ. ಸದಸ್ಯೆ ಉಮಾ ಪ್ರಭು ಮತ್ತಿತರರು ಹಾಜರಿದ್ದರು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.ಕೂಡಿಗೆ: ಸರ್ಕಾರಿ ಪದವಿಪೂರ್ವ ಕಾಲೇಜು ಶಿರಂಗಾಲದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಸಹಕಾರ ಕ್ಷೇತ್ರದ ಮಹತ್ವ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಉಪನ್ಯಾಸ ನೀಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಸಹಕಾರ ಸಂಘದ ಹುಟ್ಟು, ಬೆಳವಣಿಗೆ ಮತ್ತು ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಕೆ.ಎನ್. ಪಲ್ಲವಿ, ಸಿ.ಎಸ್. ಹೇಮಲತಾ, ಎಸ್.ಆರ್. ವೆಂಕಟೇಶ್, ಗಣೇಶ್ ಮೊದಲಾದವರು ಇದ್ದರು.
ಸುಂಟಿಕೊಪ್ಪ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಮತದಾನದ ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ವಹಿಸಿ ಮಾತನಾಡಿ, ನಮ್ಮ ದೇಶವು ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವದು ದೇಶದಲ್ಲಿ ನೆಲೆಸಿರುವ ಪ್ರಜೆಗಳಿಂದ ದೇಶದ ಪ್ರಜೆಗಳಾದ ನಾವು ಮತದಾನದ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು ಎಂದರು.
ಉಪನ್ಯಾಸಕಿ ಕೆ.ಎಸ್. ಕವಿತಾ ಪ್ರಾಸ್ತಾವಿಕ ನುಡಿಯಾಡಿದರು. ಈ ಸಂದರ್ಭ ಉಪನ್ಯಾಸಕರಾದ ಪಿ. ಸೋಮಚಂದ್ರ, ಬೆಳ್ಳಿಯಪ್ಪ ಎಸ್.ಹೆಚ್. ಈಶ, ಉಪನ್ಯಾಸಕಿಯರಾದ ಕೆ. ಕವಿತಾ ಭಕ್ತ್, ಸುಕನ್ಯಾ, ಪದ್ಮಾವತಿ, ಜಯಶ್ರೀ, ಮಂಜುಳಾ, ಕಾವ್ಯ, ಕನಕ, ವಿದ್ಯಾರ್ಥಿಗಳು ಹಾಜರಿದ್ದರು.
ಕೂಡಿಗೆ: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಸಂಸತ್‍ನ ಕ್ರೀಡಾ ಮಂತ್ರಿ ವಿದ್ಯಾರ್ಥಿ ಬಿ.ಎನ್. ಯಶವಂತ್, ಧ್ಯಾನ್‍ಚಂದ್ ಅವರ ಭಾವಚಿತ್ರಕ್ಕೆ ಹೂವುಗಳನ್ನು ಅರ್ಪಣೆ ಮಾಡುವದರ ಮೂಲಕ ಚಾಲನೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಮಾತನಾಡಿದರು. ತೊರೆನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ದೈಹಿಕ ಶಿಕ್ಷಕ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಸೋಮಯ್ಯ ವಹಿಸಿದ್ದರು. ಬಿ ವಲಯ ಮಟ್ಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಎಲ್ಲಾ ಕ್ರೀಡಾಪಟುಗಳಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಕೆ. ಕೃಷ್ಣ ಬಹುಮಾನ ವಿತರಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕ್ರೀಡಾಪಟುಗಳ ಸಾಧನೆಯ ಹಿಂದೆ ಕೆಲಸ ಮಾಡಿದ ದೈಹಿಕ ಶಿಕ್ಷಕಿ ಕೆ.ಟಿ. ಸೌಮ್ಯ, ಶಿಕ್ಷಕರಾದ ಲೋಕೇಶ್, ರಮ್ಯಾ, ಶೈಲಜಾ, ವಿಜಯ ಕುಮಾರ್ ಮೊದಲಾದವರಿದ್ದರು.
ಕೂಡಿಗೆ: ಎಡವನಾಡು ಸರ್ಕಾರಿ ಗಿರಿಜನ ಆಶ್ರಮ ಶಾಲೆ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಂಡ ಪ್ರಶಸ್ತಿಯನ್ನು ಪಡೆಯುವ ಮೂಲಕ ಸಾಧನೆಗೈದಿದ್ದಾರೆ.
ಹೆಬ್ಬಾಲೆಯಲ್ಲಿ ನಡೆದ ವಲಯಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸುವದರ ಜೊತೆಗೆ ಅಥ್ಲೆಟಿಕ್, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ ಕ್ರೀಡೆಯಲ್ಲಿ ಎಂಟು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.