ಸುಂಟಿಕೊಪ್ಪ, ಸೆ. 5: ಮಾದಾಪುರ ಗ್ರಾಮ ಪಂಚಾಯಿತಿ ವಿಭಾಗದ ಮೂವತೋಕ್ಲು ಗ್ರಾಮದಲ್ಲಿ ಕಳೆದ 1 ತಿಂಗಳಿನಿಂದ ಕುಡಿಯುವ ನೀರಿನ ಬವಣೆ ತಲೆ ತೋರಿದ್ದು, ಗ್ರಾಮಸ್ಥರ ಮನವಿಗೆ ಪಂಚಾಯಿತಿ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

2018ರ ಜಲ ಪ್ರಳಯದಿಂದ ಭೂಕುಸಿತಕ್ಕೊಳಗಾಗಿ ಈ ವಿಭಾಗದ ಕೃಷಿಕರ, ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆ ಯಾಗಿದೆ. ಮುಕ್ಕಾಟಿರ ಉತ್ತಪ್ಪ ಅವರು ಭೂಕುಸಿತದಿಂದ ಪ್ರಾಣವನ್ನೇ ಕಳೆದುಕೊಂಡರು. ಆನೇಕ ಮಂದಿಯ ಮನೆ ತೋಟ ಅತಿವೃಷ್ಟಿಗೆ ಬಲಿ ಯಾದರೂ ಸರಕಾರದಿಂದ ಅಲ್ಪ ಸ್ವಲ್ಪ ಪರಿಹಾರ ಬಿಟ್ಟರೆ ಏನೇನೂ ಸಿಗಲಿಲ್ಲ. ಇದರಿಂದ ಇನ್ನೂ ಚೇತರಿಸಿ ಕೊಳ್ಳಲಾಗದೆ ಚಡಪಡಿಸುತ್ತಿದ್ದು, ಈ ಮಳೆಗಾಲದಲೂ ನಮಗೆ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ವಿದ್ಯುತ್ ಸಮಸ್ಯೆ ಮಳೆಗಾಲ ಆರಂಭದಿಂದಲೇ ಕಾಡತೊಡಗಿದೆ. ಸಂಬಂಧಿಸಿದ ಇಲಾಖೆಗೆ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವದೇ ರೀತಿಯ ಕ್ರಮಕೈಗೊಂಡಿಲ್ಲ.

ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಜನರ ಆಶೋತ್ತರಗಳನ್ನು ಈಡೇರಿಸುವ ಕಾಳಜಿ ಒಂದಿಷ್ಟು ಇಲ್ಲದಾಗಿದೆ. ಕೂಡಲೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಒದಗಿಸದಿದ್ದಲಿ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವದೆಂದು ವಿಪಿನ್, ಮಧು, ಉಣ್ಣಿಕೃಷ್ಣ ಎಚ್ಚರಿಸಿದ್ದಾರೆ.