ಕುಶಾಲನಗರ, ಸೆ. 4: ಡಿಸಿಎಂ ಗೋವಿಂದ ಕಾರಜೋಳ ಅವರು ಕುಶಾಲನಗರ ಮೂಲಕ ಮಡಿಕೇರಿಗೆ ತೆರಳುತ್ತಿದ್ದ ಸಂದರ್ಭ ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದ ಕಾಂಗ್ರೆಸ್ ಮುಖಂಡರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದರು.

ಮಂಗಳವಾರ ರಾತ್ರಿ ಉಪ ಮುಖ್ಯಮಂತ್ರಿಗಳು ಬರುತ್ತಿದ್ದ ಮಾಹಿತಿ ತಿಳಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಜಿ.ಪಂ. ಸದಸ್ಯೆ ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮತ್ತಿತರರು ಡಿ.ಕೆ. ಶಿವಕುಮಾರ್ ಅವರ ಬಂಧನ ವಿರೋಧಿಸಿ ಪ್ರತಿಭಟನೆಗೆ ಸಿದ್ಧರಾಗಿರುವ ಮಾಹಿತಿ ಹಿನ್ನೆಲೆ ರಾಜ್ಯ ಮೀಸಲು ಪಡೆ ಪೊಲೀಸರು ವಶಕ್ಕೆ ತೆಗೆದುಕೊಂಡು ಕುಶಾಲನಗರ ಠಾಣೆಯಲ್ಲಿ ಸ್ವಲ್ಪಕಾಲ ಇರಿಸಿ ನಂತರ ಬಿಡುಗಡೆಗೊಳಿಸಿದರು. ಈ ನಡುವೆ ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಸ್ವಲ್ಪಕಾಲ ಗೊಂದಲ ಕಂಡುಬಂತು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಕುಶಾಲನಗರ ಸಮೀಪ ಕೊಪ್ಪ ಗೇಟ್ ಬಳಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮತ್ತು ಪಕ್ಷದ ಪ್ರಮುಖರು ಬರಮಾಡಿಕೊಂಡರು. ಇದೇ ಸಂದರ್ಭ ಗೋವಿಂದ ಕಾರಜೋಳ ಅವರು ಕೊಪ್ಪ ಸೇತುವೆ ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಡಿಕೇರಿಗೆ ತೆರಳಿದರು.

ಬುಧವಾರ ಬೆಳಿಗ್ಗೆ ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಕುಶಾಲನಗರ ಪಟ್ಟಣದಲ್ಲಿ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.