ಸೋಮವಾರಪೇಟೆ, ಸೆ.5: ಪ್ರಾಥಮಿಕ ಶಿಕ್ಷಣದಿಂದಲೇ ನೈತಿಕ ಮೌಲ್ಯಗಳು ಹುಟ್ಟಬೇಕು. ಶಿಕ್ಷಣ ಕ್ಷೇತ್ರ ಇನ್ನಷ್ಟು ಗಟ್ಟಿಗೊಳ್ಳಬೇಕಾದರೆ ಶಿಕ್ಷಣದ ಸಾರ್ವತ್ರೀಕರಣ ಆಗಬೇಕಾದ ಅಗತ್ಯತೆ ಹೆಚ್ಚಿದೆ ಎಂದು ಹಾಸನದ ಶ್ರೀ ಸಿದ್ದೇಶ್ವರ ಕೈಗಾರಿಕಾ ಕೇಂದ್ರದ ಕಿರಿಯ ತರಬೇತಿ ಅಧಿಕಾರಿ ಅಹಮ್ಮದ್ ಹಗರೆ ಅಭಿಮತ ವ್ಯಕ್ತಪಡಿಸಿದರು.
ಕೊಡಗು ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸ ಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಪ್ರಧಾನಿಗಳು ಒಂದೇ ದೇಶ, ಒಂದೇ ಕಾನೂನು ಎಂಬ ಘೋಷಣೆಯನ್ನು ಮೊಳಗಿಸಿ ಆ ಮಾರ್ಗದಲ್ಲಿ ಕಾರ್ಯೋನ್ಮುಖ ರಾಗಿದ್ದು, ಇದೀಗ ಹಲವಷ್ಟು ಬ್ಯಾಂಕ್‍ಗಳ ವಿಲೀನ ಪ್ರಕ್ರಿಯೆಯೂ ನಡೆಯುತ್ತಿದೆ. ಅದರಂತೆ ದೇಶಾದ್ಯಂತ ಒಂದೇ ರೀತಿಯ ಶಿಕ್ಷಣವನ್ನು ಅಳವಡಿಸಲು ಕ್ರಮಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಿಸಿದರು.
ಶಿಕ್ಷಣದ ತಾರತಮ್ಯ ಹೋಗಲಾ ಡಿಸಲು ಏಕರೂಪ ಶಿಕ್ಷಣ ಪದ್ದತಿ ಅಳವಡಿಸಬೇಕು ಎಂದು ಪ್ರತಿಪಾದಿಸಿದ ಅವರು, ಶಿಕ್ಷಕರು ಹಲವಷ್ಟು ಕಷ್ಟಗಳ ನಡುವೆ ಹದಗೆಡುತ್ತಿರುವ ಶಿಕ್ಷಣ ಕ್ಷೇತ್ರವನ್ನು ಉಳಿಸಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬೋಧನೆಗಿಂತಲೂ ಇತರ ಕೆಲಸಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ‘ಶಿಕ್ಷಕರನ್ನು ತರಗತಿಯ ಒಳಗೆ ಬಿಡಿ’ ಎಂಬ ಕೂಗು ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಸದಸ್ಯರಾದ ಪೂರ್ಣಿಮಾ ಗೋಪಾಲ್, ಸರೋಜಮ್ಮ, ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅವರುಗಳು ಮಾತನಾಡಿ, ದೇಶದ ಸತ್ಪ್ರಜೆಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕ ವರ್ಗದ ಮೇಲಿದ್ದು, ಮಕ್ಕಳೊಂದಿಗೆ ಸಮಾಜವೂ ಸಹ ಶಿಕ್ಷಕರನ್ನು ಅನುಸರಿಸುತ್ತದೆ. ಈ ಹಿನ್ನೆಲೆ ಶಿಕ್ಷಕರು ತಮ್ಮ ಹೊಣೆಗಾರಿಕೆ ಅರಿತು ಕರ್ತವ್ಯ ನಿರ್ವಹಿಸಬೇಕೆಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರು, ಶಿಕ್ಷಕ ವರ್ಗಕ್ಕೆ ಶುಭಕೋರಿದರು. ವೇದಿಕೆಯಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮೀಶ್, ಶಿಕ್ಷಕರ ಸಂಘದ ಮೈಸೂರು ವಲಯ ಉಪಾಧ್ಯಕ್ಷ ಸಿ.ಕೆ. ಶಿವಕುಮಾರ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕರುಂಬಯ್ಯ, ಮಂಜೇಶ್, ಕುಮಾರ್, ನಾಗೇಶ್, ದಿನೇಶ್, ವಿರೂಪಾಕ್ಷ, ಸುರೇಶ್, ಧರ್ಮಪ್ಪ, ದಯಾನಂದ್, ವಿದ್ಯಾ ಇಲಾಖೆ ಪತ್ತಿನ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ. ಸೋಮಪ್ಪ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಬಾಲಕೃಷ್ಣ ರೈ, ಬಿಸಿಎಂ ಇಲಾಖೆಯ ಶ್ರೀಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಅವರು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಬಸವರಾಜು ಅವರು ಗಳು ಕಾರ್ಯಕ್ರಮ ನಿರ್ವಹಿಸಿದರು.
ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿಯಾದ ಶಿಕ್ಷಕರು, ಶಾಲೆಗಳ ಆಯಾಗಳನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲಾ ಮುಖ್ಯೋಪಾಧ್ಯಾಯ ರುಗಳನ್ನು ಅಭಿನಂದಿಸಲಾಯಿತು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಿಕ್ಷಕರ ಮಕ್ಕಳಾದ ಶ್ರಾವಣಿ, ಮೋನಿಕ, ಚಿನ್ಮಯಿ ಅವರುಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.