ಮೂರ್ನಾಡು, ಸೆ. 3 : ಇಲ್ಲಿನ ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ನೀಡಲು ನಿರ್ಧರಿಸಿದೆ.

ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯುತ್ತಿರುವ 57 ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯ ವತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪಠ್ಯ ಪುಸ್ತಕ, ನೋಟು ಪುಸ್ತಕ, ಸಮವಸ್ತ್ರ, ಬ್ಯಾಗು, ಶೂಗಳು ಹಾಗೂ ಇನ್ನಿತರ ಪರಿಕರಗಳನ್ನು ನೀಡಲಾಗುವದು ಮತ್ತು ಶಾಲಾ ಶುಲ್ಕದಲ್ಲಿ ರೂ. 3 ಸಾವಿರ ಕಡಿತಗೊಳಿಸಲಾಗುವದು ಎಂದು ವಿದ್ಯಾಸಂಸ್ಥೆಯ ಅಧ್ಯಕ್ಷ ಮಾಳೇಟಿರ ನವೀನ್ ಕಾರ್ಯಪ್ಪ ತಿಳಿಸಿದರು. ನೆರೆ ಸಂತ್ರಸ್ತ 57 ವಿದ್ಯಾರ್ಥಿ ಗಳಿಗೆ ಮುಂದಿನ ಒಂದು ವಾರದಲ್ಲಿ ಪಠ್ಯ ಸಾಮಗ್ರಿಗಳನ್ನು ನೀಡಲಾಗುತ್ತದೆ ಇದಕ್ಕಾಗಿ ವಿದ್ಯಾಸಂಸ್ಥೆಯು ಸುಮಾರು ರೂ. 4 ಲಕ್ಷ ಗಳನ್ನು ಸಹಾಯಾರ್ಥವಾಗಿ ವಿನಿಯೋಗಿಸುತ್ತಿದೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಮುಕ್ಕಾಟೀರ ರವಿ ಚೀಯಣ್ಣ, ಖಜಾಂಚಿ ಬಡುವಂಡ ಬೆಲ್ಲು ಚಿಣ್ಣಪ್ಪ, ನಿರ್ದೇಶಕರಾದ ಅವರೆಮಾದಂಡ ಸುಗುಣ ಸುಬ್ಬಯ್ಯ, ಎನ್.ಓ. ಮ್ಯಾಥ್ಯು, ಶಾಲಾ ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ ಮತ್ತು ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.