ವೀರಾಜಪೇಟೆ, ಸೆ. 3: ಕ್ರೀಡೆ ಹಾಗೂ ಇತರ ರಂಗಗಳಲ್ಲಿ ಸಾಧನೆ ಮಾಡಲು ವಿಶೇಷ ಆಸಕ್ತಿ, ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗೆ ಆದ್ಯತೆ ನೀಡುವದರೊಂದಿಗೆ ಕ್ರೀಡೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಇಟ್ಟೀರ ಬಿದ್ದಪ್ಪ ಹೇಳಿದರು.

ವೀರಾಜಪೇಟೆ ಕಾವೇರಿ ಕಾಲೇಜು ವತಿಯಿಂದ, ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಶನ್ನಿನ ಸಹಯೋಗದೊಂದಿಗೆ ಮುರುವಂಡ ನಂಜಪ್ಪ ಸ್ಮಾರಕ ಜಿಲ್ಲಾಮಟ್ಟದ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ವಿದ್ಯಾರ್ಥಿ ಜೀವನದಲ್ಲಿ ಎಲ್ಲ ಕ್ರೀಡೆಗಳಲ್ಲಿಯೂ ತನ್ನ ಪ್ರತಿಭೆಯನ್ನು ತೋರಿಸುವಂತಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮಹತ್ವಾಕಾಂಕ್ಷಿ ಯೋಜನೆಯಾದ ಫಿಟ್ ಇಂಡಿಯಾ ವನ್ನು ಜಾರಿಗೆ ತಂದಿರುವದು ದೇಶದ ನಾಗರಿಕರಿಗೆ ಸಹಕಾರಿ ಯಾಗಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಕೊಡವ ಸಮಾಜದ ಮಾಜಿ ಅಧ್ಯಕ್ಷ ನಾಯಡ ವಾಸು ನಂಜಪ್ಪ ಮಾತನಾಡಿ, ಟೇಬಲ್ ಟೆನ್ನಿಸ್ ಪಂದ್ಯಾಟ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳೆಸಲು ಇಂತಹ ಜಿಲ್ಲಾ ಮಟ್ಟದ ಪಂದ್ಯಾಟಗಳು ಉತ್ತೇಜನ ನೀಡುತ್ತವೆ ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಕಾಕೋಟುಪರಂಬು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಮೇವಡ ಚಿಣ್ಣಪ್ಪ, ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಶನ್‍ನ ಅಧ್ಯಕ್ಷ ಮಹಮ್ಮದ್ ಆಶೀಫ್ ಮಾತನಾಡಿದರು. ಗೋಣಿಕೊಪ್ಪಲಿನ ನಿವೃತ್ತ ಪೋಸ್ಟ್ ಮಾಸ್ಟರ್ ಮುರುವಂಡ ಉಮ್ಮಕ್ಕ ನಂಜಪ್ಪ ಉಪಸ್ಥಿತರಿದ್ದರು.

ಕ್ರೀಡಾ ವಿಭಾಗದ ಡಾ. ಎಂ.ಎಂ. ದೇಚಮ್ಮ ಹಾಜರಿದ್ದರು. ಪ್ರಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ಸ್ವಾಗತಿಸಿ, ರಂಜಿತ, ಕವನ ಹಾಗೂ ಸಾಲಿಕ ನಿರೂಪಿಸಿದರು. ಎನ್.ಎಂ. ನಾಣಯ್ಯ ವಂದಿಸಿದರು.