ಚೆಟ್ಟಳ್ಳಿ, ಆ. 30: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಯಿಂದ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂತ್ರಸ್ತರಾದವರಿಗೆ ನೆರವಿನ ಹಸ್ತ ಚಾಚಿರುವ ಸುನ್ನಿ ಸ್ಟುಡೆಂಟ್ ಫೆಡರೇಷನ್ ಹಾಗೂ ಎಸ್ವೈಎಸ್ ಸಂಘಟನೆಗಳು, ದಿನಸಿ ಪದಾರ್ಥಗಳು ಸೇರಿದಂತೆ ಅವಶ್ಯಕ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿವೆ.
ಜಿಲ್ಲೆಯಲ್ಲಿ ಸುರಿದ ಮಹಾ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ತಲೆಯ ಮೇಲಿನ ಸೂರನ್ನು ಕಳೆದುಕೊಂಡು ಜನರು ಉಟ್ಟಬಟ್ಟೆಯಲ್ಲಿ ಪರಿಹಾರ ಕೇಂದ್ರವನ್ನು ಸೇರಿದ್ದರು.
ಇಂತಹ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಎಸ್ವೈಎಸ್ ಹಾಗೂ ಎಸ್ಎಸ್ ಎಫ್ ಸಂಘಟನೆಗಳು ಕೇರಳದ ಕ್ಯಾಲಿಕಟ್, ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ದಾನಿಗಳಿಂದ ಸಂಗ್ರಹಿಸಿದ ಸುಮಾರು 40 ಲಕ್ಷ ರೂಪಾಯಿಗಳ ದಿನಸಿ ಪದಾರ್ಥ ಹಾಗೂ ಅವಶ್ಯಕ ಸಾಮಗ್ರಿಗಳನ್ನು ಜಾತಿ, ಮತಭೇದದ ಎಲ್ಲೆಯನ್ನು ಮೀರಿ ಸಂತ್ರಸ್ತರಿಗೆ ವಿತರಿಸುವ ಮೂಲಕ ಸುನ್ನಿ ಸಂಘ ಕುಟುಂಬವು ಮಾನವೀಯತೆ ಯನ್ನು ಮೆರೆದಿದೆ.
ಕಾವೇರಿ ನದಿ ಪ್ರವಾಹ ಪೀಡಿತ ಪ್ರದೇಶಗಳಾದ ಸಿದ್ದಾಪುರ, ನೆಲ್ಲಿಹುದಿಕೇರಿ, ಕುಂಬಾರಗುಂಡಿ, ಗುಹ್ಯ, ಕೂಡುಗದ್ದೆ, ಕರಡಿಗೋಡು, ಬೆಟ್ಟದ ಕಾಡು, ಬರಡಿ, ಕೊಂಡಂಗೇರಿ ಸೇರಿದಂತೆ ಜಿಲ್ಲೆಯ ವಿವಿದೆಢೆಗಳ ಸಾವಿರಾರು ಸಂತ್ರಸ್ತರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಸುನ್ನಿ ಸಂಘ ಕುಟುಂಬದ ಕಾರ್ಯಕರ್ತರು ವಿತರಿಸಿದರು.
ನೆರೆ ಸಂತ್ರಸ್ತರಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಶಾಶ್ವತ ಪರಿಹಾರ ಕಲ್ಪಿಸುವ ಸಂದರ್ಭ ಅಗತ್ಯ ಸಹಕಾರವನ್ನು ನೀಡುವದಾಗಿ ಸಂಘಟನೆಗಳ ಪ್ರಮುಖರು ಈ ಸಂದರ್ಭ ಆಶ್ವಾಸನೆ ನೀಡಿದ್ದಾರೆ.
ಮಹಾಮಳೆಯಿಂದ ಬೆಟ್ಟಕುಸಿದು ಅನೇಕ ಜೀವಗಳನ್ನು ಬಲಿ ಪಡೆದ ವೀರಾಜಪೇಟೆಯ ತೋರ ಗ್ರಾಮದ ಘೋರ ದುರಂತ ಸಂಭವಿಸಿದ ಸ್ಥಳಕ್ಕೂ ಎಸ್ವೈಎಸ್ ಹಾಗೂ ಎಸ್ಎಸ್ಎಫ್ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ದಾಖಲಾತಿಗಳ ವಿತರಣೆ: ನದಿ ಪ್ರವಾಹದಲ್ಲಿ ಮನೆÀಗಳ ಜೊತೆಗೆ ಬಟ್ಟೆಬರೆ, ನಗನಗದು ಸೇರಿದಂತೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲಾತಿಗಳು ನದಿ ನೀರಿನಲ್ಲಿ ಕೊಚ್ಚಿಹೋಗಿದ್ದವು. ಈ ಹಿನ್ನೆಲೆ ಅಗತ್ಯ ದಾಖಲಾತಿಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಎಸ್ವೈಎಸ್ ಹಾಗೂ ಎಸ್ಎಸ್ಎಫ್ ಸಂಘಟನೆಗಳ ವತಿಯಿಂದ ನೆಲ್ಲಿಹುದಿಕೇರಿಯ ದಾರುನ್ನಜಾತ್ ಸೆಂಟರ್ನಲ್ಲಿ ರಿಲೀಫ್ಸೆಲ್ ಅನ್ನು ಆರಂಭಿಸಿ ಸಂತ್ರಸ್ತರಿಗೆ ಅಗತ್ಯ ದಾಖಲಾತಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಎಸ್ವೈಎಸ್ ಸಂಘಟನೆಯ ಪ್ರಮುಖ ಹಫೀಳ್ ಸಅದಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನಲ್ಲಿ ಮುಳುಗಿದ ಮನೆಗಳ ಸ್ವಚ್ಛತಾ ಕಾರ್ಯದಲ್ಲೂ ಎಸ್ವೈಎಸ್ ಹಾಗೂ ಎಸ್ಎಸ್ಎಫ್ ಸಂಘಟನೆಗಳ ಕಾರ್ಯ ಕರ್ತರು ತೊಡಗಿಸಿಕೊಳ್ಳುವ ಮೂಲಕ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿವೆ.
ಅಲ್ಲದೆ ದಾನಿಗಳ ನೆರವಿನಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ವಿತರಿಸುವದು ಹಾಗೂ ಕಳೆದುಹೋದ ದಾಖಲಾತಿ ಗಳನ್ನು ಉಚಿತವಾಗಿ ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದರು.
ಸಮಾಜದ ಪ್ರಮುಖ ಉಸ್ಮಾನ್ ಸುಂಟಿಕೊಪ್ಪ ಮಾತನಾಡಿ, ಪ್ರವಾಹದಿಂದಾಗಿ ನದಿ ದಡದಲ್ಲಿದ್ದ ಮನೆಗಳು ವಾಸಕ್ಕೆ ಯೋಗ್ಯವಿಲ್ಲ ದಂತಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಪೈಸಾರಿ ಜಾಗಗಳನ್ನು ಗುರುತಿಸಿ ಮನೆಗಳನ್ನು ಕಳೆದುಕೊಂಡವರಿಗೆ ಹಾಗೂ ನದಿದಡದ ನಿವಾಸಿಗಳಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಿಕೊಡಬೇಕಿದೆ ಎಂದು ಮನವಿ ಮಾಡಿದರು.ಮಡಿಕೇರಿ: ನ್ಯೂಜಿಲ್ಯಾಂಡ್ನಲ್ಲಿರುವ ಮಾಳೇಟಿರ ಪ್ರವೇಶ್ ಕಾರ್ಯಪ್ಪ 2018ರ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಷ್ಟಗೊಳಗಾಗಿರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಾಗುವಂತೆ ಐವರು ವಿದ್ಯಾರ್ಥಿಗಳಿಗೆ ರೂ. 25 ಸಾವಿರದಂತೆ ಒಟ್ಟು 1,25,000 ರೂಪಾಯಿ ನೆರವು ನೀಡಿದ್ದಾರೆ.
ಈ ಪೈಕಿ ಮೊದಲ ಕಂತನ್ನು ತಲಾ ರೂ. 10 ಸಾವಿರದಂತೆ ಚೆಕ್ಕನ್ನು ಕೊಡಗು ಇನ್ ನೀಡ್ ಫೌಂಡೇಶನ್ನ ಸರಳ ಸಮಾರಂಭದಲ್ಲಿ ಅಧ್ಯಕ್ಷೆ ಪೊಯ್ಯಟ್ಟಿರ ಭಾನುಮತಿ, ಉಪಾಧ್ಯಕ್ಷ ಮಾಳೇಟಿರ ಕರುಂಬಯ್ಯ ಮತ್ತು ಪೋಷಕರ ಸಮ್ಮುಖದಲ್ಲಿ ನೀಡಲಾಯಿತು.ವೀರಾಜಪೇಟೆ: ಪ್ರಕೃತಿ ವಿಕೋಪ ಹಾಗೂ ಪ್ರವಾಹ ಸಂದರ್ಭ ಜಿಲ್ಲಾಡಳಿತ ಮತ್ತು ಇಲ್ಲಿನ ಅಧಿಕಾರಿಗಳು ನಿರಂತರ ಕೆಲಸ ಮಾಡಿ ಸಂತ್ರಸ್ತರನ್ನು ಸ್ಪಂದಿಸಿರುವದು ಅಧಿಕಾರಿಗಳ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಮಿನಿ ವಿಧಾನಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಹಾಗೂ ಪ್ರವಾಹದಲ್ಲಿ ಮನೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು ಜಿಲ್ಲೆಯ ಅಭಿವೃದ್ಧಿಗೆ ರೂ. 538 ಕೋಟಿ ಮಂಜೂರಾಗಿದ್ದು, ರೂ. 100 ಕೋಟಿ ಬಿಡುಗಡೆಗೊಂಡಿದೆ. ಜಿಲ್ಲೆಯ ಬಹುತೇಕ ರಸ್ತೆ ಒಳಚರಂಡಿಗಳು ಹಾಳಾಗಿದ್ದು ಹಲವಾರು ಜನರು ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಗುಡ್ಡ ಕುಸಿದು ಪ್ರಾಣ ಹಾನಿ ಆಗಿದೆ. ತೋರ ಗ್ರಾಮದ ಗುಡ್ಡ ಕುಸಿದ ಪರಿಣಾಮ 10 ಜನರಲ್ಲಿ 6 ಜನರ ಮೃತ ದೇಹ ಸಿಕ್ಕಿದೆ. ಉಳಿದ 4 ದೇಹಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ವಿಕೋಪದಲ್ಲಿ ಮೃತ ಪಟ್ಟವರಿಗೆ ಸ್ಥಳದಲ್ಲಿಯೆ ರೂ. 5 ಲಕ್ಷ ಪರಿಹಾರ ಮತ್ತು ಶವ ಸಂಸ್ಕಾರಕ್ಕೆ ರೂ. 5 ಸಾವಿರ ನೀಡಲಾಗಿದೆ. ಬಹುತೇಕ ಕಡೆಗಳಲ್ಲಿ ಬೆಳೆ ನಷ್ಟವಾಗಿದ್ದು ಆಯಾಯ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿ ನಷ್ಟದ ಪರಿಹಾರ ನೀಡಲಾಗುವದು. ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ರೂ. 10 ಸಾವಿರ ಪರಿಹಾರ ನೀಡಲಾಗಿದೆ ಎಂದು ಹೇಳಿದರು. 14 ಮಂದಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮೀತಾ ಪ್ರಕಾಶ್, ತಹಶೀಲ್ದಾರ್ ಪುರಂದರ, ಜಿ.ಪಂ. ಸದಸ್ಯೆ ಭವ್ಯ ಚಿಟ್ಟಿಯಣ್ಣ, ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.ಸಿದ್ದಾಪುರ: ಪ್ರವಾಹದಿಂದ ಮನೆ ಕಳೆದುಕೊಂಡಿರುವ ನದಿ ತೀರದ ನಿವಾಸಿಗಳಿಗೆ ಸರಕಾರದ ವತಿಯಿದ ಪುನರ್ವಸತಿ ಕಲ್ಪಿಸಿಕೊಡಲಾಗುವದು ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
ಪ್ರವಾಹಪೀಡಿತ ಪ್ರದೇಶಗಳಾದ ಕೊಂಡಂಗೇರಿ, ಗುಹ್ಯ, ಕರಡಿಗೋಡುವಿನ ಮನೆಗಳು ಭಾಗಶಃ ಹಾನಿಯಾದ ಕುಟುಂಬಗಳಿಗೆ ಚೆಕ್ ವಿತರಿಸಿ ಮಾತನಾಡಿದರು. ಈ ಬಾರಿಯ ಮಹಾಮಳೆಗೆ ಪ್ರವಾಹ ಏರಿಕೆಯಾಗಿ ನೂರಾರು ಮನೆಗಳು ಹಾನಿಯಾಗಿದೆ. ಈ ಹಿನ್ನೆಲೆ ಮನೆ ಕಳೆದುಕೊಂಡವರು ಆತಂಕಪಡುವದು ಬೇಡ ಎಂದರು.
ಈ ಸಂದರ್ಭ ಕೊಂಡಂಗೇರಿಯ 58, ಕರಡಿಗೋಡುವಿನ 68 ಹಾಗೂ ಗುಹ್ಯ ಗ್ರಾಮ 68 ಕುಟುಂಬಗಳಿಗೆ ಚೆಕ್ ವಿತರಿಸಿದರು. ಈ ಸಂದರ್ಭ ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಸ್ಮೀತಾ ಪ್ರಕಾಶ್, ತಹಶೀಲ್ದಾರ್ ಪುರಂದರ, ಗ್ರಾಮ ಲೆಕ್ಕಿಗರಾದ ಒಮಪ್ಪ ಬಣಕಾರ್, ಅನೀಶ್, ಮುತ್ತಪ್ಪ, ಗ್ರಾ.ಪಂ. ಸದಸ್ಯರು ಸೇರಿದಂತೆ ಇನ್ನಿತರರು ಇದ್ದರು.ಸೋಮವಾರಪೇಟೆ: ಪ್ರವಾಹದಿಂದ ಸಂತ್ರಸ್ತರಾದ ಭಾಗಮಂಡಲ ಸಮೀಪದ ಕೋರಂಗಾಲದ ಸಂತ್ರಸ್ತರಿಗೆ ಬೆಂಗಳೂರು ಮಲ್ಲೇಶ್ವರಂ ಕ್ಲಬ್ನ ಪದಾಧಿಕಾರಿಗಳು ಅಗತ್ಯ ವಸ್ತುಗಳನ್ನು ಪರಿಹಾರ ರೂಪದಲ್ಲಿ ವಿತರಿಸಿದರು. ಕ್ಲಬ್ನ ಪದಾಧಿಕಾರಿಗಳಾದ ಕುಲಕರ್ಣಿ, ಸುಬ್ರಮಣ್ಯ, ಪ್ರವೀಣ್ ಸೇರಿದಂತೆ ಇತರರು ಸುಮಾರು 130 ಪರಿಹಾರದ ಕಿಟ್ಗಳನ್ನು ವಿತರಿಸಿದರು.
ಉಳಿದ ಕಿಟ್ಗಳನ್ನು ಸೋಮವಾರಪೇಟೆಯ ಲಯನ್ಸ್ ಕ್ಲಬ್ನ ಮೂಲಕ ವಿತರಿಸಲಾಗುವದು. ಸುಮಾರು ರೂ. 2.70 ಲಕ್ಷ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕ್ಲಬ್ನಿಂದ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.ನಾಪೆÇೀಕ್ಲು: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರಾಗಿದ್ದ ಸುಮಾರು 135 ಕುಂಟುಂಬಕ್ಕೆ ತಲಾ ರೂ. 10 ಸಾವಿರ ಚೆಕ್ ಅನ್ನು ನಾಪೆÉÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ, ಸದಸ್ಯ ಮಹಮ್ಮದ್ ಖುರೇಶಿ ವಿತರಿಸಿದರು.ಸೋಮವಾರಪೇಟೆ: ಪ್ರಾಕೃತಿಕ ವಿಕೋಪದಲ್ಲಿ ನಲುಗಿದ ಜನರಿಗೆ ಕೆಂಪೇಗೌಡ್ರು ಸೇನೆಯಿಂದ ಅಗತ್ಯ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಕೆಂಪೇಗೌಡ್ರು ಸೇನೆಯ ರಾಜ್ಯಾಧ್ಯಕ್ಷ ಎನ್. ರವಿ, ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜೇಶ್ ಗೌಡ, ಯುವ ಘಟಕದ ಅಧ್ಯಕ್ಷ ರಾಜೇಶ್, ಪ್ರಧಾನ ಕಾರ್ಯದರ್ಶಿ ದಾಮೋದರ್, ಅರುಣ್ ಮತ್ತು ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಮಡಿಕೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.