ಮಡಿಕೇರಿ, ಆ. 30: ಕೊಡಗು ಜಿಲ್ಲೆಯ ತೋರ ಗ್ರಾಮದ ವೃದ್ಧ ದಂಪತಿ ತಮ್ಮ ಜಾನುವಾರುಗಳಿಗೆ ಮೇವಿಲ್ಲದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ; ‘ಶಕ್ತಿ’ಯಲ್ಲಿ ಪ್ರಕಟಗೊಂಡಿದ್ದ ವರದಿಗೆ ರಾಮಚಂದ್ರಪುರ ಮಠ ಸ್ಪಂದಿಸಿದೆ. ಮಾತ್ರವಲ್ಲದೆ ಕಾವೇರಿ ಹೊಳೆದಂಡೆ ವ್ಯಾಪ್ತಿಯಲ್ಲಿ ಮಳೆಹಾನಿಯಿಂದ ತೊಂದರೆಗೆ ಸಿಲುಕಿರುವ ರೈತರು ಹಾಗೂ ದಕ್ಷಿಣ ಕೊಡಗಿನ ಲಕ್ಷ್ಮಣತೀರ್ಥ ಹೊಳೆ ಪ್ರವಾಹದಿಂದ ದನಗಳಿಗೆ ಮೇವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವು ಕಲ್ಪಿಸಿದ್ದಾರೆ.
ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಬಾಳೆಲೆಯಲ್ಲಿ ಲಕ್ಷ್ಮಣತೀರ್ಥ ಹೊಳೆಯಲ್ಲಿ ಸಂಭವಿಸಿದ ನೆರೆ ನೀರಿನಿಂದ, ಬಲಮುರಿ ಗ್ರಾಮದಲ್ಲಿ ಕಾವೇರಿ ಹೊಳೆಯ ನೆರೆನೀರಿನಿಂದ, ತೋರ ಗ್ರಾಮದಲ್ಲಿ ಬೆಟ್ಟ ಕುಸಿದು ಊರಿನ ಗೋಮಾಳ, ಹುಲ್ಲುಗಾವಲು, ಹೊಲಗದ್ದೆ ನಾಶವಾಗಿರುವ ಕಳವಳಕಾರಿ ಘಟನೆ ಜರುಗಿದೆ. ಇವರೆಲ್ಲ ಗೋ ಆಧಾರಿತ ಕೃಷಿಕರಾಗಿದ್ದು, ಇಲ್ಲಿ ನೆರೆಯಿಂದಾಗಿ ಗೋವುಗಳಿಗೆ ಮೇವಿಲ್ಲದಾಗಿರುವ ದುರಂತ ಸಂಭವಿಸಿತು. ಶ್ರೀರಾಮ ಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ನಿರ್ದೇಶನದಂತೆ ಈ ಊರಿನ ಗೋವುಗಳಿಗೆ ಮೇವಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಶ್ರೀರಾಮಚಂದ್ರಾಪುರ ಮಠದ ಗೋರಕ್ಷಾ ಯೋಜನೆಯ ಕಾಮದುಘಾ ಸಂಚಾಲಕ ಡಾ. ವೈ.ವಿ. ಕೃಷ್ಣಮೂರ್ತಿ ಸಂಯೋಜನೆಯಲ್ಲಿ ಮುಳ್ಳೇರಿಯ ಹವ್ಯಕ ಮಂಡಲ ಕೊಡಗು ವಲಯ ಅಧ್ಯಕ್ಷ ಕೆ.ಆರ್. ನಾರಾಯಣಮೂರ್ತಿ ಜವಾಬ್ದಾರಿಯಲ್ಲಿ 4 ಲಾರಿ ಹುಲ್ಲು ವಿತರಿಸಲಾಯಿತು.
ಕೊಡಗು ವಲಯ ಸಹಾಯಕ ವಿಭಾಗ ಪ್ರಧಾನ ಕೆ.ಎಸ್. ಗೋಪಾಲಕೃಷ್ಣ, ಸೇವಾ ವಿಭಾಗ ಪ್ರಧಾನ ಕೆ.ಎಸ್. ಉದಯಕುಮಾರ್, ಪಾಲಂಗಾಲ ಘಟಕ ಗುರಿಕ್ಕಾರ ಪಿ.ಎನ್. ನಾಗರಾಜ, ಚೆಯ್ಯಂಡಾಣೆ, ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೆಳಿಯಂಡ್ರ ಶರಣು , ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯರು, ಗೋಪರಿವಾರ ಸದಸ್ಯ ಅಚ್ಚುತ, ಕನ್ನಂಬಾಡಿ ಶ್ರೀ ಲಕ್ಷ್ಮಿದೇವಸ್ಥಾನದ ಅಧ್ಯಕ್ಷ ರಘು ಶ್ರೀಕಂಠಪ್ಪ, ಪಶುವೈದ್ಯಾಧಿಕಾರಿ ಭವಿಷ್ಯಕುಮಾರ್, ಗ್ರಾಮಸ್ಥರು ಈ ಕಾರ್ಯದಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಮೇವು ದೊರಕಿಸಿದ್ದಕ್ಕೆ ಧನ್ಯವಾದ ಸಮರ್ಪಿಸಿದರು. ತೋರದಲ್ಲಿ ಕೀತಿಯಂಡ ರಾಜ ಕುಟ್ಟಪ್ಪ, ಬಲಮುರಿಯಲ್ಲಿ ಕೊಂಗೀರಂಡ ಗಣೇಶ್ ಸಹಕರಿಸಿದರು. ತೋರದಲ್ಲಿ ಮಕ್ಕಳಿಲ್ಲದ ದಂಪತಿಗಳಾದ 73 ವರ್ಷ ಪ್ರಾಯದ ಬೆಳ್ಳಿಯಪ್ಪ ಹಾಗೂ ಸರೋಜ ದಂಪತಿ ಹಸುಗಳನ್ನು ಸಾಕುವ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದಾರೆ.
ಇದೀಗ ಗದ್ದೆ ಪೂರ್ತಿ ಬೆಟ್ಟ ಕುಸಿದು ಮಣ್ಣು ತುಂಬಿರುವದರಿಂದ ರಾಸುಗಳಿಗೆ ಮಠದಿಂದ ಹುಲ್ಲು ವಿತರಿಸಿದ್ದಾರೆ.