ಕುಶಾಲನಗರ, ಆ. 31: ಕಾರೊಂದರಲ್ಲಿ ಬೀಟೆ ಮರದ ನಾಟಾ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು 2 ಲಕ್ಷ ಮೌಲ್ಯದ ಮರ ಸಹಿತ ವಾಹನ ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಕೊಂಡ ಘಟನೆ ನಡೆದಿದೆ.

ಶುಕ್ರವಾರ ತಡರಾತ್ರಿಯಲ್ಲಿ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯ ವಾಲ್ನೂರು-ಕಾನನ್‍ಕಾಡು ರಸ್ತೆ ಬಳಿ ತೆರಳುತ್ತಿದ್ದ ಮಾರುತಿ ಓಮ್ನಿ (ಕೆಎ.04.1620) ತಡೆದು ಪರಿಶೀಲನೆ ನಡೆಸಿದಾಗ ಬೀಟೆ ಮರದ 9 ನಾಟಾ ಗಳು ಪತ್ತೆಯಾಗಿವೆ.

ಈ ಸಂದರ್ಭ ವಾಹನದಲ್ಲಿದ್ದ ಇಬ್ಬರು ಓಡಿ ತಲೆಮರೆಸಿಕೊಂಡಿದ್ದು, ವಾಲ್ನೂರು ತ್ಯಾಗತ್ತೂರು ಗ್ರಾಮದ ಇಬ್ರಾಹಿಂ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಗಿದೆ.

ಕುಶಾಲನಗರ ಅರಣ್ಯ ವಲಯ ಅಧಿಕಾರಿ ಅನನ್ಯಕುಮಾರ್ ಮಾರ್ಗ ದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಲಾಸ್ ನೇತೃತ್ವದಲ್ಲಿ ಅರಣ್ಯ ರಕ್ಷಕ ಚರಣ್ ಕುಮಾರ್, ವೀಕ್ಷಕರಾದ ಧರ್ಮಪಾಲ, ಆಲ್ಬರ್ಟ್, ಜಗದೀಶ್, ವಾಹನ ಚಾಲಕ ವಾಸು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.