ಮಡಿಕೇರಿ, ಆ.30 : ಹಿಂದಿನ ಸಮ್ಮಿಶ್ರ ಸರಕಾರ ಜಾರಿಗೆ ತಂದಿರುವ ಋಣ ಪರಿಹಾರ ಕಾಯ್ದೆಯಿಂದ ಲೈಸೆನ್ಸ್ ಪಡೆದ ಗಿರವಿ ವ್ಯಾಪಾರಸ್ಥರು ಮತ್ತು ಲೇವಾದೇವಿದಾರರನ್ನು ಹೊರಗಿಡಬೇಕು ಎಂದು ಕೊಡಗು ಜಿಲ್ಲಾ ಗಿರವಿ ಮತ್ತು ಲೇವಾದೇವಿದಾರರ ಸಂಘ ಸರಕಾರವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಮುಖರು, ಸರಕಾರದ ಈ ಕಾಯ್ದೆಯಲ್ಲಿ ಸ್ಪಷ್ಟತೆ ಇಲ್ಲದಿರುವದರಿಂದ ಗಿರವಿ ವ್ಯಾಪಾರಸ್ಥರು ಭಯಭೀತರಾಗು ವಂತಾಗಿದೆ ಎಂದು ಹೇಳಿದರು.
ಲೈಸೆನ್ಸ್ ಪಡೆದ ಗಿರವಿ ಮತ್ತು ಲೇವಾದೇವಿದಾರರು, ರಾಜ್ಯ ಸರಕಾರಕ್ಕೆ ನಿಗದಿತ ಶುಲ್ಕ ಪಾವತಿಸಿ, ಸರಕಾರ ನಿಗದಿಪಡಿಸಿದ ಶೇ.14ರ ಬಡ್ಡಿ ದರದಲ್ಲಿ ಮತ್ತು ನಿರ್ದಿಷ್ಟವಾದ ನಿಯಮ ಮತ್ತು ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವದರೊಂದಿಗೆ ಅಗತ್ಯವಿರುವ ರೈತರಿಗೆ ಮತ್ತು ಬಡವರಿಗೆ ಆಪತ್ಕಾಲದಲ್ಲಿ ಹಣ ಸಹಾಯ ದೊರಕಿಸಿಕೊಡುತ್ತಾ ಬರುತ್ತಿದ್ದಾರೆ. ಇದೀಗ ಕಾನೂನುಬದ್ಧ ವ್ಯವಹಾರ ನಡೆಸಿದರೂ ಅವರಿಗೆ ಉಳಿಗಾಲವಿಲ್ಲ ಎಂಬ ಭಾವನೆ ಬರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರಕಾರ ಈ ಹಿಂದೆ ರೈತರ ಸಾಲ ಮನ್ನಾ ಯೋಜನೆ ಜಾರಿಗೆ ತಂದಾಗ ಸಾಲ ಮನ್ನಾ ಮಾಡುವ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳಿಗೆ ಸರಕಾರದ ಬೊಕ್ಕಸದಿಂದ ಹಣವನ್ನು ನೀಡಿದೆ. ಆದರೆ ಅದೇ ರಾಜ್ಯ ಸರಕಾರ ಲೈಸೆನ್ಸ್ ಪಡೆದ ಗಿರವಿ ವ್ಯಾಪಾರಸ್ಥರಿಗೆ ಹಾಗೂ ಲೇವಾದೇವಿದಾರರಿಗೆ ಯಾವದೇ ಪರಿಹಾರ ನೀಡದಿರುವದು ಸಂವಿಧಾನದ ಅನುಚ್ಛೇದ 14ರ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಸರಕಾರದ ಈ ಕ್ರಮದಿಂದ ರೈತರಿಗೆ ಹಾಗೂ ಬಡವರಿಗೆ ಆಪತ್ಕಾಲದಲ್ಲಿ ಹಣದ ಸಹಾಯ ದೊರಕಿಸಿಕೊಡುವ ಗಿರವಿ ಮತ್ತು ಲೇವಾದೇವಿ ವ್ಯವಹಾರ ಮುಚ್ಚಿ ಹೋದರೆ ಅದಕ್ಕೆ ಹೊಣೆ ಯಾರು? ಎಂದು ಆತಂಕ ವ್ಯಕ್ತಪಡಿಸಿದರು.ಈ ಹಿನ್ನೆಲೆಯಲ್ಲಿ ಸರಕಾರ ಈ ಕಾನೂನಿನ ಬಗ್ಗೆ ಸ್ಪಷ್ಟತೆ ನೀಡುವದರೊಂದಿಗೆ ಲೈಸೆನ್ಸ್ ಪಡೆದು ಗಿರವಿ ಮತ್ತು ಲೇವಾದೇವಿ ವ್ಯವಹಾರ ನಡೆಸುವವರನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಚೆಲ್ಲಾರಾಂ, ಖಜಾಂಚಿ ಎ.ಪಿ.ಲೋಕೇಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಕೆ.ಪಿ.ಪ್ರಶಾಂತ್, ಉಪಾಧ್ಯಕ್ಷ ಉಲ್ಲಾಸ್ ಶೇಟ್, ಗೋಣಿಕೊಪ್ಪದ ಪ್ರಕಾಶ್ ಹಾಗೂ ವೀರಾಜಪೇಟೆಯ ಎಸ್.ಹೆಚ್. ಮಂಜುನಾಥ್ ಉಪಸ್ಥಿತರಿದ್ದರು.