ಕುಶಾಲನಗರ, ಆ. 31: ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ತುರ್ತು ನೆರವು ಕಲ್ಪಿಸುವದರೊಂದಿಗೆ, ಹಾಡಿಯ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ನೀಡುವದು ಸೇರಿದಂತೆ, ಮಡಿಕೇರಿ ಗ್ರಾಮೀಣ ಭಾಗಗಳಿಗೆ ಮಿನಿ ಬಸ್‍ಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ. ಹಾರಂಗಿ ಪ್ರವಾಸಿ ಮಂದಿರದಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಭೆ ಆಯೋಜಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿರುವದಾಗಿ ಸ್ಪಷ್ಟಪಡಿಸಿದರು.ಕಳೆದ ವರ್ಷ ಹಾಗೂ ಪ್ರಸಕ್ತ ಪ್ರಾಕೃತಿಕ ವಿಕೋಪದಿಂದ ಎದುರಾ ಗಿರುವ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡಿರುವ ಸರಕಾರ; ರೈತರ ಜಮೀನುಗಳಲ್ಲಿ ತುಂಬಿಕೊಂಡಿರುವ ಮರಳು, ಭೂಕುಸಿತದಿಂದ ಅಲ್ಲಲ್ಲಿ ಬಿದ್ದಿರುವ ಮರಗಳ ತೆರವಿಗೆ ಆಯಾ ಇಲಾಖೆಗಳು ಅಡ್ಡಿಪಡಿಸದಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಜನತೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ದಿಸೆಯಲ್ಲಿ ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆ ಇಲ್ಲವೆಂದು ಸ್ಪಷ್ಟಪಡಿಸಿದ ಸಚಿವರು, ದಸರಾ ನಾಡಹಬ್ಬಕ್ಕೂ ಅಗತ್ಯ ನೆರವು ಒದಗಿಸುವದಾಗಿ ಭರವಸೆಯಿತ್ತರು.
ಶೇ. 100 ಪರಿಹಾರ
ಕೊಡಗು ಜಿಲ್ಲೆಯಲ್ಲಿ ಒಟ್ಟು 4146 ಸಂತ್ರಸ್ತ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದ್ದು ಆಗಸ್ಟ್ 31 ರ ಒಳಗಾಗಿ ಶೇ 100 ರಷ್ಟು ಪರಿಹಾರ ಕಲ್ಪಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಹಾರಂಗಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪ ಹಾನಿ ಸಂಭವಿಸಿದ ಮನೆಗಳಿಗೆ ಪರಿಹಾರ ನೀಡುವ ಪಟ್ಟಿ ಈಗಾಗಲೆ ತಯಾರಿ ಮಾಡಲಾಗಿದ್ದು ತಾತ್ಕಾಲಿಕ ಪರಿಹಾರ ಧನ ಒದಗಿಸಲಾಗಿದೆ. ಕೊಡಗು ಜಿಲ್ಲೆಯ 38 ಗಿರಿಜನ ಹಾಡಿಗಳಲ್ಲಿ ಮಳೆ ಪ್ರವಾಹದ ನಂತರದ ವಾಸ್ತವ ಸ್ಥಿತಿಯನ್ನು ಪರಿಶೀಲನೆ ನಡೆಸಲಾಗಿದ್ದು; ಅರಣ್ಯ ಇಲಾಖೆ ಕೆಲವೆಡೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿಯಾಗಿರುವ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಗಳೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಯ ಶಾಸಕರು ಈ ವಿಚಾರ ಪ್ರಸ್ತಾಪ ಮಾಡಿದ ಹಿನೆÀ್ನಲೆಯಲ್ಲಿ ಮುಖ್ಯ ಮಂತ್ರಿಗಳು
(ಮೊದಲ ಪುಟದಿಂದ) ತನಗೆ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಿರುವದಾಗಿ ಸಚಿವರು ತಿಳಿಸಿದರು. ಇನ್ನೆರೆಡು ದಿನಗಳಲ್ಲಿ ಜಿಲ್ಲೆಯ ಎಲ್ಲಾ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವದು ಎಂದು ಭರವಸೆ ನೀಡಿದರು.
ತೆರವಿಗೆ ಕ್ರಮ : ಅರಣ್ಯ ಮೂಲಕ ವಿದ್ಯುತ್ ತಂತಿಗಳು ಹಾದು ಹೋಗುವ ಸಂದರ್ಭ ಇನ್ಸುಲೇಟೆಡ್ ಕೇಬಲ್ ಅಳವಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವದು. ಅಂದಾಜು ರೂ. 1 ಕೋಟಿ 76 ಲಕ್ಷ ವೆಚ್ಚದ ಹೆಚ್ಚುವರಿ ಖರ್ಚಿನ ಯೋಜನೆಯ ಬಗ್ಗೆ ಇಂಧನ ಇಲಾಖೆಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದರು.
ಮರಳು ತೆರವು: ಪ್ರವಾಹದ ನಂತರ ಜಿಲ್ಲೆಯಲ್ಲಿ ಅನೇಕರ ಜಮೀನು, ಗದ್ದೆ, ಹೊಲಗಳಲ್ಲಿ ಮರಳು ತುಂಬಿ ನಿಂತಿದ್ದು ಇದರಿಂದ ಬೆಳೆ ಬೆಳೆಯಲು ಅನಾನುಕೂಲವಾಗುತ್ತಿರುವ ಬಗ್ಗೆ ಮನಗಂಡು; ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ವಂತ ಜಮೀನಿನಲ್ಲಿ ತುಂಬಿರುವ ಮರಳು ತೆರವುಗೊಳಿಸಲು ಯಾವದೇ ಅಡ್ಡಿ ಮಾಡದಂತೆ ಸೂಚಿಸಲಾಗಿದೆ. ಪಿಕ್‍ಅಪ್ ವಾಹನಗಳ ಮೂಲಕ ಮಾತ್ರ ಅಂತಹ ಮರಳನ್ನು ಸಾಗಿಸಲು ಅವಕಾಶ ಕಲ್ಪಿಸಲಾಗುವದೇ ಹೊರತು, ಯಾವದೇ ಮರಳು ದಂಧೆಗೆ ಅವಕಾಶ ಇರುವದಿಲ್ಲ ಎಂದು ಸೂಚಿಸಿದರು.
ಮರ ತೆರವಿಗೆ ಕ್ರಮ : ಜಿಲ್ಲೆಯಲ್ಲಿ ಸ್ವಂತ ತೋಟಗಳಲ್ಲಿ ಬಿದ್ದಿರುವ ಮರಗಳನ್ನು ಸೆ.7 ರ ನಂತರ ತೆರವುಗೊಳಿಸಿ ಸಾಗಾಟ ಮಾಡಲು ನಿಯಮಾನುಸಾರ ಅನುಮತಿ ಕಲ್ಪಿಸಲಾಗುವದು ಎಂದು ಸಚಿವರು ತಿಳಿಸಿದರು.
ದಸರಾ ಅನುದಾನ : ಮಡಿಕೇರಿ ದಸರಾ ಕಾರ್ಯಕ್ರಮಕ್ಕೆ ಅನುದಾನ ಕಲ್ಪಿಸುವ ನಿಟ್ಟಿನಲ್ಲಿ ಸೆ.5 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವದು ಎಂದರಲ್ಲದೆ ಯಾವದೇ ರೀತಿಯ ಅನುದಾನದ ಕೊರತೆ ಇರುವದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾವೇರಿ ನದಿ ತಟದಲ್ಲಿ ಮುಳುಗಡೆಯಾಗುತ್ತಿರುವ ಮನೆಗಳನ್ನು ತಕ್ಷಣ ತೆರವುಗೊಳಿಸಿ, ಅವರ ಪುನರ್ವಸತಿಗಾಗಿ ಶಾಶ್ವತ ವ್ಯವಸ್ಥೆ ಕಲ್ಪಿಸಲು ಸರಕಾರ ಯೋಜನೆ ರೂಪಿಸಲಿದೆ ಎಂದು ಸಚಿವ ಸುರೇಶ್‍ಕುಮಾರ್ ತಿಳಿಸಿದರು.
ಅರಣ್ಯ ಇಲಾಖೆ, ಭೂ ಮತ್ತು ಗಣಿವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಮುಖ್ಯಮಂತ್ರಿಗಳ ನಿರ್ದೇಶನದಂತೆ ಜಿಲ್ಲೆಯ ಅರಣ್ಯ ಇಲಾಖೆ; ಭೂ ಮತ್ತು ಗಣಿವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದರು.
ಮಿನಿ ಬಸ್: ಕೊಡಗು ಜಿಲ್ಲೆಯಲ್ಲಿ ಕೂಡಲೆ 6 ಮಿನಿ ಬಸ್‍ಗಳ ಸೇವೆ ಆರಂಭಿಸಲು ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಸುರೇಶ್ ಕುಮಾರ್, ಮಾಕುಟ್ಟ, ದೇವಸ್ತೂರು, ಕಾಲೂರು, ಸೂರ್ಲಬ್ಬಿ, ಕೆ.ನಿಡುಗಣೆ, ಗಾಳಿಬೀಡು ಗ್ರಾಮಗಳಿಗೆ ಒಟ್ಟು 6 ಬಸ್‍ಗಳ ಓಡಾಟ ಮಾಡುವಂತೆ ಸೂಚನೆ ನೀಡಿದರು.
ಕಾವೇರಿ ರಕ್ಷಣೆಗೆ ಒತ್ತು : ಕಾವೇರಿ ನದಿ ಸಂರಕ್ಷಣೆಗಾಗಿ ಉತ್ತರ ಭಾರತ ಗಂಗಾ ನದಿಗೆ ರಿವರ್ ಪೊಲೀಸ್ ವ್ಯವಸ್ಥೆ ಕಲ್ಪಿಸಿರುವಂತೆ ಕಾವೇರಿ ನದಿ ಸಂರಕ್ಷಣೆಗೆ ವಿಶೇಷವಾಗಿ ಯೋಜನೆ ರೂಪಿಸುವ ನಿಟ್ಟಿನಲ್ಲಿ ಸಚಿವರ ಗಮನ ಸೆಳೆದಾಗ, ಈ ಸಂಬಂಧ ಉತ್ತರ ಪ್ರದೇಶ ಸರಕಾರದಿಂದ ವರದಿ ತರಿಸಿ, ಸರಕಾರದ ಮಟ್ಟದಲ್ಲಿ ಚರ್ಚಿಸಿ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ವ್ಯಾಪ್ತಿಯ ರಕ್ಷಣೆಗಾಗಿ ರಿವರ್ ಪೊಲೀಸ್ ವಿಭಾಗವೊಂದರ ಸ್ಥಾಪನೆಗೆ ಕಾರ್ಯಯೋಜನೆ ರೂಪಿಸ ಲಾಗುವದು ಎಂದು ಭರವಸೆ ನೀಡಿದರು.
-ಚಿತ್ರ, ವರದಿ: ಚಂದ್ರಮೋಹನ್, ನಾಗರಾಜಶೆಟ್ಟಿ.