ಮಡಿಕೇರಿ, ಆ. 31: ಭಾಗಮಂಡಲ-ಚೇರಂಗಾಲ ವ್ಯಾಪ್ತಿಯಲ್ಲಿನ ಬ್ರಹ್ಮಗಿರಿ ಬೆಟ್ಟ ತಪ್ಪಲಿನಲ್ಲಿ ಮರ ಹನನದೊಂದಿಗೆ ಬೆಟ್ಟ ಪ್ರದೇಶವನ್ನು ಸಮತಟ್ಟು ಮಾಡಿ ಹಾನಿಪಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮೂಲಕ ಈ ಕೃತ್ಯಕ್ಕೆ ಕಾರಣರಾಗಿರುವ ಮಡಿಕೇರಿಯ ಕಂದಾಯ ನಿರೀಕ್ಷಕ ಜಿ.ಟಿ. ಸತೀಶ್ ಹಾಗೂ ಅವರ ಪುತ್ರ ಕಾರ್ತಿಕ್ ಎಂಬವರ ವಿರುದ್ಧ ಈಗಾಗಲೇ ಎಫ್.ಐ.ಆರ್. ದಾಖಲಿಸಲ್ಪಟ್ಟಿರುವ ವಿಚಾರ ತಿಳಿದು ಬಂದಿದೆ. ಆದರೆ ದಾಖಲಿಸಲ್ಪಟ್ಟಿರುವ ಈ ಪ್ರಕರಣ ಹಾಗೂ ಮಹಜರಿನಲ್ಲಿರುವ ವರದಿ ಒಂದು ರೀತಿಯಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಕಂಡು ಬರುತ್ತಿದೆ.ಈ ಬಗ್ಗೆ ಆ. 13ರ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡು ವಿಚಾರ ಬೆಳಕಿಗೆ ಬಂದ ಆ ದಿನದಂದೇ ಎಫ್.ಐ.ಆರ್. ಮಾಡಲಾಗಿದೆ. ಅಲ್ಲಿನ ಸರ್ವೆ ನಂಬರ್ 85/15ರಲ್ಲಿ ಅತಿಕ್ರಮ ಪ್ರವೇಶ ಮಾಡಿ ಅಕ್ರಮವಾಗಿ ಕೆರೆ ಮತ್ತು ಮನೆದಳ ನಿರ್ಮಿಸಿದ್ದು ಹಾಗೂ ಜಾಗ ಹಸನು ಮಾಡಿರುವದು (ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 33, 62, 80 ಕ.ಅ. ಅಧಿನಿಯಮಗಳು - 1969ರ ಕಲಂ 25 ಖ/W/65 ಕರ್ನಾಟಕ ರಾಜ್ಯ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಕಲಂ ಖ/W/5 ಮತ್ತು ಜೀವ ವೈವಿಧ್ಯತಾ ಅಧಿನಿಯಮ 2002 ಕಲಂ 7ರ ಉಲ್ಲಂಘನೆಯಾಗಿದೆ ಎಂದು ಎಫ್.ಐ.ಆರ್.ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಈ ವರದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್ ಸ್ಥಳದಲ್ಲಿಯೇ ಇದೆ. ಸ್ಥಳದಲ್ಲಿ ನಿರ್ಮಿಸಿರುವ ಕೆರೆಯೂ ಇರುವದಾಗಿ ತಿಳಿಸಲಾಗಿದ್ದು, ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಬಂಧಿಸಿಲ್ಲ ಎಂದಿದೆ. ಇದರೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲೂ ಇದರ ಉಲ್ಲೇಖವಿದೆಯಾದರೂ, ಆರೋಪಿಗಳ ವಾಸದ ಮನೆ (ಅಂಚೆ) ಬಗ್ಗೆ ನಿಖರವಾದ ಮಾಹಿತಿ ಇಲ್ಲ ಎಂದು ತಿಳಿಸಿರುವದು ಅಚ್ಚರಿ ಮೂಡಿಸಿದೆ.
ದಾಖಲಾತಿಯಲ್ಲೇನಿದೆ...?
ಈ ಪ್ರಕರಣ ನಡೆದಿರುವ ಜಾಗದ ಸರ್ವೆ ನಂಬರ್ 85/15 ಆಗಿದ್ದು, ಈ ಪ್ರದೇಶ ಒಟ್ಟು 69.10 ಎಕರೆಯಷ್ಟಿದೆ. ಆರ್.ಟಿ.ಸಿ. ದಾಖಲೆಯಲ್ಲಿ ಸರಕಾರದವರು ಅರಣ್ಯ ಇಲಾಖೆ ಎಂದಿದೆ. ಈ ಕುರಿತಾಗಿ ತಾ. 13ರ ‘ಶಕ್ತಿ’ಯಲ್ಲಿ ವಿಸ್ತøತ ವರದಿ ಪ್ರಕಟವಾಗಿದ್ದು, ಅದೇ ದಿನದಂದು ಭಾಗಮಂಡಲ ಗಸ್ತು ಉಸ್ತುವಾರಿ ಇದ್ದ ಅರಣ್ಯ ರಕ್ಷಕ ವಾಗೀಳಯ್ಯ ಎಂಬವರು ಮಹಜರು ಮಾಡಿ ವರದಿ ತಯಾರಿಸಿದ್ದಾರೆ.
ಮಹಜರುವಿನ ಸಂಕ್ಷಿಪ್ತ ಮಾಹಿತಿ
ಈ ಬಗ್ಗೆ ದೊರೆತ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಸರ್ವೆ ನಂ. 85/15ರಲ್ಲಿ ಸುಮಾರು ಜಾಗವನ್ನು ಅತಿಕ್ರಮ ಮಾಡಿ ಕೆರೆ, ಮನೆದಳ, ಶೆಡ್ ನಿರ್ಮಿಸಿರುವದು ಗೋಚರಿಸಿದೆ. ಕೆಲವೇ ದಿನಗಳ ಹಿಂದೆ ಹಿಟಾಚಿ ಯಂತ್ರದ ಸಹಾಯದಿಂದ ಸ್ಥಳದಲ್ಲಿದ್ದ ಸುಮಾರು 0.50 ರಿಂದ 0.60 ಅಳತೆಯ ಸುಮಾರು ಕಾಡುಮರಗಳನ್ನು ಬೀಳಿಸಿ ಅಂದಾಜು 10 ಘನ ಮೀಟರ್‍ನಷ್ಟು ದೊರೆಯಬಹುದಾದ ಸೌದೆಯನ್ನು ಮಣ್ಣು ಅಡಿಯಲ್ಲಿ ಹಿಟಾಚಿ ಯಂತ್ರದ ಸಹಾಯದಿಂದ ಮುಚ್ಚಿರುವದು, ಕೆರೆ ಗುಂಡಿ ನಿರ್ಮಿಸಲು ಅಪಾರ ಪ್ರಮಾಣದ ಮಣ್ಣು ತೆಗೆದಿರುವದು, 200 ರಿಂದ 300 ಮೀಟರ್ ದೂರದಲ್ಲಿ ಮನೆದಳ ನಿರ್ಮಿಸಿರುವದು, ಪಕ್ಕದಲ್ಲಿ ಶೆಡ್ ನಿರ್ಮಿಸಿರುವದು ಕಂಡು ಬಂದಿರುವದಾಗಿ ನಮೂದಿಸಲಾಗಿದೆ. ಈ ಸಂಬಂಧ ಗ್ರಾಮಸ್ಥರನ್ನು ವಿಚಾರಿಸಿದಾಗ ಇದನ್ನು ಮಾಡಿರುವದು ಜಿ.ಟಿ. ಸತೀಶ್ ಹಾಗೂ ಅವರ ಮಗ ಕಾರ್ತಿಕ್ ಎಂದು ತಿಳಿಯಿತು. ಮೊಬೈಲ್ ಸಂಖ್ಯೆ (9008708736) ಪಡೆದು ಸಂರ್ಕಿಸಿ ವಿಚಾರಿಸಿದಾಗ ಸದ್ರಿ ಜಾಗದ ಸರ್ವೆ ನಂ. 37/2ರಲ್ಲಿ 3.70 ಎಕರೆ ಜಾಗ ನನ್ನ ಸ್ವಾದೀನದಲ್ಲಿದ್ದು, ಇಲ್ಲಿ ಕೆಲಸ ನಿರ್ವಹಿಸಿರುವದಾಗಿ ಒಪ್ಪಿಕೊಂಡಿದ್ದಾರೆ ಎಂದಿದೆ.
ಈ ಬಗ್ಗೆ ಸಿಬ್ಬಂದಿಗಳು ಗ್ರಾಮಸ್ಥರಲ್ಲಿ ವಿಚಾರಿಸಿದಾಗ ಸದ್ರಿ ಜಾಗವು ಹಾಗೂ ನಮ್ಮ ಮೇಲ್ನೋಟಕ್ಕೆ ಪೈಸಾರಿ ಜಾಗ ಎಂದು ಕಂಡು ಬಂದಿದೆ ಎಂದು ವಿವರಿಸಲಾಗಿದೆ. ಇದು ಒಂದೆಡೆಯಾದರೆ ನಂತರದ ಮಹಜರು ವಿವರದಲ್ಲಿ, ಈ ರೀತಿ ಅರಣ್ಯ - ಪೈಸಾರಿ ಹಾಗೂ ಸರಕಾರಿ ಒಡೆತನದ ಜಾಗದಲ್ಲಿ ಈ ಕೆಲಸ ಮಾಡಿರುವದು ಮತ್ತು ಸೂಕ್ಷ್ಮ ಪರಿಸರವನ್ನು ನಾಶಪಡಿಸಿರುವದು ಅರಣ್ಯ ಕಾಯ್ದೆ ಕಾನೂನಿನ ಉಲ್ಲಂಘನೆಯಾದ್ದರಿಂದ ಅರಣ್ಯ ಮೊಕದ್ದಮೆ ದಾಖಲಿಸುವದು ಸೂಕ್ತ ಎಂದು ಸ್ಥಳದಲ್ಲಿದ್ದ ಪಂಚಾಯಿತಿದಾರರು ತೀರ್ಮಾನಿಸಿದ ಮೇರೆ ಭಾಗಮಂಡಲ ವಲಯ ಅರಣ್ಯಾಧಿಕಾರಿಗಳ ಕಚೇರಿ ಸಂಪರ್ಕಿಸಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.
ಇಲ್ಲಿರುವದೇ ಪ್ರಶ್ನೆ...!
ಸದರಿ ಸರ್ವೆ ನಂಬರ್‍ನ ಜಾಗ ಆರ್.ಟಿ.ಸಿ. ದಾಖಲೆಯಲ್ಲಿ ಸರಕಾರದವರು ಅರಣ್ಯ ಇಲಾಖೆ ಎಂದಿದೆ.
(ಮೊದಲ ಪುಟದಿಂದ) ಆದರೆ ಈ ಬಗ್ಗೆ ಅರಣ್ಯ ಇಲಾಖೆ ಸ್ಪಷ್ಟವಾಗಿ ಹೇಳುತ್ತಿಲ್ಲ ಒಂದೆಡೆ ಪೈಸಾರಿ ಜಾಗ, ಸರಕಾರಿ ಜಾಗ ಎಂದು ಹೇಳುತ್ತಿದೆ.
ಈ ಪ್ರದೇಶದಲ್ಲಿ ಇಷ್ಟೆಲ್ಲಾ ಕೆಲಸ ಕಾರ್ಯಗಳು ನಡೆಯುತ್ತಿದ್ದರೂ, ಅದೂ ಇಲ್ಲಿಯವರೆಗೆ ಇಲಾಖೆಯ ಗಮನಕ್ಕೆ ಬಂದಿರಲಿಲ್ಲವೇ? ಕನಿಷ್ಟ ಮೂರು ನಾಲ್ಕು ತಿಂಗಳಿಂದ ಇಲ್ಲಿ ಕೆಲಸ ನಡೆಯುತ್ತಿರುವ ಮಾಹಿತಿ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಆದರೆ ಅರಣ್ಯ ಇಲಾಖೆಯ ಜಾಗದವರು ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದೇಕೆ ಎಂಬದು ಪ್ರಶ್ನೆಯಾಗಿದೆ.
ಮತ್ತೊಂದು ಗಂಭೀರ ಅಂಶ
ಇಲ್ಲಿ ಗಮನಿಸಬೇಕಾದ ಮತ್ತೊಂದು ಗಂಭೀರವಾದ ವಿಚಾರವಿದೆ. ಮರದ ವಿಚಾರಕ್ಕೆ ಬಂದರೆ ಅಂದಾಜು 10 ಘನ ಮೀಟರ್‍ನಷ್ಟು ದೊರೆಯಬಹುದಾದ ಸೌದೆಯ ಬಗ್ಗೆ ಮಾತ್ರ ಉಲ್ಲೇಖವಿದೆ. ಆದರೆ ಇದೊಂದು ದಟ್ಟಾರಣ್ಯ ಪ್ರದೇಶವಾಗಿತ್ತು ಎಂಬದಕ್ಕೆ ಸುತ್ತಲಿನ ದೃಶ್ಯವೇ ಸಾಕ್ಷಿಯಾಗಿದೆ. ಪ್ರಕರಣ ದಾಖಲಿಸುವ ಮುನ್ನ ಗೂಗಲ್ ಮ್ಯಾಪ್‍ನ ಮೂಲಕ ಕೆಲಸ ನಿರ್ವಹಣೆಗೆ ಮುಂಚಿತವಾಗಿ ಈ ಜಾಗ ಯಾವ ರೀತಿ ಇತ್ತು (ಡೆನಿಸ್ಟಿ ಆಫ್ ಫಾರೆಸ್ಟ್) ಎಂಬದನ್ನು ಇಲಾಖೆ ಪರಿಶೀಲನೆ ನಡೆಸಬೇಕಿತ್ತು ಎನ್ನಲಾಗುತ್ತಿದೆ. ಸದ್ಯದ ಮಟ್ಟಿಗೆ ಅತಿಕ್ರಮ ಪ್ರವೇಶ, ಜೀವ ವೈವಿಧ್ಯತೆಗೆ ಧಕ್ಕೆ ಎಂಬಂತೆ ಕೇವಲ ಎಫ್.ಐ.ಆರ್. ಮಾತ್ರ ದಾಖಲಾಗಿದ್ದು ಮುಂದಿನ ಕ್ರಮದ ಬಗ್ಗೆ ಕಾದು ನೋಡುವಂತಾಗಿದೆ.