ಸೋಮವಾರಪೇಟೆ, ಆ. 29: ಖಾಸಗಿಯಾಗಿ ಪೈಪ್ ಅಳವಡಿಸಲು ರಾಜ್ಯ ಹೆದ್ದಾರಿಯನ್ನು ಅಗೆದು, ಅದನ್ನು ಸೂಕ್ತ ರೀತಿಯಲ್ಲಿ ಸರಿಪಡಿಸದ ಹಿನ್ನೆಲೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ಸೋಮವಾರಪೇಟೆ, ಶನಿವಾರ ಸಂತೆ, ರಾಜ್ಯಹೆದ್ದಾರಿಯ ಕಾಗಡಿಕಟ್ಟೆ ತಿರುವಿನಲ್ಲಿ ಪೈಪ್ ಅಳವಡಿಸಲು ರಸ್ತೆಯನ್ನು ಅಗೆದಿದ್ದು, ಇಲ್ಲಿ ಮರು ಡಾಮರೀಕರಣ ಮಾಡದೆ ಗುಂಡಿಬಿದ್ದಿದೆ. ಪರಿಣಾಮ ವಾಹನ ಚಾಲಕರು ಪರದಾಡುವಂತಾಗಿದೆ. ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಚಕ್ರಗಳು ಗುಂಡಿಗೆ ಇಳಿದ ತಕ್ಷಣ ಶಬ್ದ ಉಂಟಾಗುತ್ತದೆ. ವಾಹನಗಳಿಗೂ ತೊಂದರೆಯಾಗುತ್ತದೆ. ರಾಜ್ಯ ಹೆದ್ದಾರಿ ನಿರ್ವಹಣೆಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.